ನವದೆಹಲಿ: ಕೋವಿಡ್ 19 ನೂತನ ರೂಪಾಂತರ ತಳಿ ಒಮಿಕ್ರಾನ್ ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮಬಂಗಾಳದಲ್ಲಿ ಮೊದಲ ಪ್ರಕರಣ ಪತ್ತೆಯಾಗುವ ಮೂಲಕ ಭಾರತದಲ್ಲಿನ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 73ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಬುಧವಾರ ನೈಜಿರಿಯಾದಿಂದ ತಮಿಳುನಾಡಿಗೆ ಆಗಮಿಸಿದ್ದ 47 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಡಿಸೆಂಬರ್ 12ರಂದು ಕೀನ್ಯಾದಿಂದ ತೆಲಂಗಾಣಕ್ಕೆ ಆಗಮಿಸಿದ್ದ 24 ವರ್ಷದ ಯುವತಿ ಹಾಗೂ ಸೋಮಾಲಿಯಾದಿಂದ ಆಗಮಿಸಿದ್ದ 23 ವರ್ಷದ ಯುವಕನಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು ಎಂದು ತೆಲಂಗಾಣ ಆರೋಗ್ಯ ಇಲಾಖೆ ತಿಳಿಸಿದೆ.
ಕೇರಳದಲ್ಲಿ ಮತ್ತೆ ನಾಲ್ಕು ಒಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದು, ಇದರೊಂದಿಗೆ ಕೇರಳದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಮುರ್ಷಿದಾಬಾದ್ ಜಿಲ್ಲೆಯಿಂದ ಪಶ್ಚಿಮಬಂಗಾಳಕ್ಕೆ ಪೋಷಕರ ಜತೆ ಬಂದಿದ್ದ 7 ವರ್ಷದ ಮಗುವಿನಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈವರೆಗೆ 10 ಒಮಿಕ್ರಾನ್ ಪ್ರಕರಣ ವರದಿಯಾಗಿದೆ. ಹತ್ತು ಮಂದಿಯಲ್ಲಿ ಒಬ್ಬರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದು, ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಕೋವಿಡ್ 19, ಒಮಿಕ್ರಾನ್, ಆರೋಗ್ಯ ಸಚಿವಾಲಯ, ತಮಿಳುನಾಡು, Covid19 , Omicron, Health ministry, LNJP, Tamilnadu, Udayavani News