ಚೆನ್ನೈ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನೊಳಗೊಂಡ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋವನ್ನು ಶೇರ್ ಮಾಡಿದ್ದ ಗಣಿತ ಉಪನ್ಯಾಸಕನನ್ನು ಬಂಧಿಸಿರುವ ಘಟನೆ ಚೆನ್ನೈನ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಇದನ್ನೂ ಓದಿ:ಪಾಲಿಕೆ ಆಯುಕ್ತರ ಮೇಲೆ ಮದ್ಯವ್ಯಸನಿ ಯುವಕರ ಗುಂಪಿನಿಂದ ಹಲ್ಲೆ: ಓರ್ವನ ಬಂಧನ
ಘಟನೆಗೆ ಸಂಬಂಧಿಸಿದಂತೆ ಉಪನ್ಯಾಸಕ ಮತ್ತಿವಣ್ಣನ್ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ವರದಿ ತಿಳಿಸಿದೆ. ಚೆನ್ನೈನ ಖಾಸಗಿ ಕಾಲೇಜಿನಲ್ಲಿ ಕಳೆದ ಒಂದು ದಶಕದಿಂದ ಗಣಿತ ಉಪನ್ಯಾಸಕನಾಗಿದ್ದು, ಅಂಬತ್ತೂರ್ ನಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿರುವುದಾಗಿ ವರದಿ ವಿವರಿಸಿದೆ.
ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣಕ್ಕಾಗಿ ಉಪಯೋಗಿಸುತ್ತಿದ್ದ ವಾಟ್ಸಪ್ ಗ್ರೂಪ್ ಗೆ ಉಪನ್ಯಾಸಕ ಮತ್ತಿವಣ್ಣನ್ ರಾತ್ರಿ ಅಶ್ಲೀಲ ವಿಡಿಯೋವನ್ನು ಕಳುಹಿಸಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಘಾತಕ್ಕೊಳಗಾಗಿದ್ದರು. ಕೂಡಲೇ ವಿಷಯವನ್ನು ಆಡಳಿತ ಮಂಡಳಿಗೆ ತಿಳಿಸಲಾಗಿತ್ತು ಎಂದು ವರದಿ ಹೇಳಿದೆ.
ಕಾಲೇಜು ಆಡಳಿತ ಮಂಡಳಿಯ ಆಂತರಿಕ ಮಟ್ಟದ ವಿಚಾರಣೆಯಲ್ಲಿ, ತನಗೆ ಈ ವಿಡಿಯೋದ ಬಗ್ಗೆ ಏನೂ ಗೊತ್ತಿಲ್ಲ ಎಂದು ತಿಳಿಸಿರುವ ಮತ್ತಿವಣ್ಣನ್, ತಾನು ಕುಡಿದ ಮತ್ತಿನಲ್ಲಿ ವಿಡಿಯೋ ಲಿಂಕ್ ಅನ್ನು ಗ್ರೂಪ್ ಗೆ ಶೇರ್ ಮಾಡಿರುವುದಾಗಿ ತಿಳಿಸಿದ್ದ.
ಅಶ್ಲೀಲ ವಿಡಿಯೋವನ್ನು ಶೇರ್ ಮಾಡಿದ್ದ ಉಪನ್ಯಾಸಕ ಮತ್ತಿವಣ್ಣನ್ ವಿರುದ್ಧ ಆಡಳಿತ ಮಂಡಳಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿತ್ತು. ನಂತರ ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ಉಪನ್ಯಾಸಕನನ್ನು ಪೊಲೀಸರು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದರು.