ತಿರುನೆಲ್ವೇಲಿ, ತಮಿಳು ನಾಡು : ತಿರುನೆಲ್ವೇಲಿ ಜಿಲ್ಲೆಯ ಪಾಳಯಂಕೋಟೈ ಎಂಬಲ್ಲಿನ ಜೋಸೆಫ್ ಮ್ಯಾಟ್ರಿಕ್ಯುಲೇಶನ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ತರಗತಿಯಲ್ಲಿ ಮುಟ್ಟಾದ ಕಾರಣ ಸಮವಸ್ತ್ರ ಮತ್ತು ಬೆಂಚ್ ಮೇಲೆ ರಕ್ತದ ಕಲೆ ಉಂಟಾದದ್ದಕ್ಕೆ ತರಗತಿ ಶಿಕ್ಷಕಿ ಆಕೆಗೆ ಬೈದು ನಿಂದಿಸಿದುದನ್ನು ಅನುಸರಿಸಿ ಬಾಲಕಿಯು 25 ಅಡಿ ಎತ್ತರದ ಕಟ್ಟಡದಿಂದ ಕೆಳ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.
ತರಗತಿಯ ಶಿಕ್ಷಕಿ ತನಗೆ ಕೊಟ್ಟಿರುವ ಮಾನಸಿಕ ಚಿತ್ರಹಿಂಸೆಯಿಂದ ಬೇಸತ್ತು ತಾನು ಬೇರೆ ಉಪಾಯವೇ ಇಲ್ಲದೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬಾಲಕಿಯ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು ಅದರ ಆಧಾರದಲ್ಲಿ ಅವರು ಆತ್ಮಹತ್ಯೆಗೆ ಚಿತಾವಣೆಗೈದ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ತನಕ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿರುವ ಹೇಳಿಕೆ ಪ್ರಕಾರ “ನನ್ನ ಮಗಳು ಎರಡು ತಿಂಗಳ ಹಿಂದಷ್ಟೇ ಮೊದಲ ಬಾರಿಗೆ ಮುಟ್ಟಾಗಿದ್ದಳು. ಅವಳಿಗೆ ಋತುಚಕ್ರದ ಬಗ್ಗೆ ಅರಿವಿಲ್ಲ. ಎರಡೇ ತಿಂಗಳಲ್ಲಿ ಮತ್ತೆ ಮುಟ್ಟಾದೇನು ಎಂಬ ಯಾವ ನಿರೀಕ್ಷೆಯೂ ಆಕೆಗೆ ಇರಲಿಲ್ಲ. ಹಾಗಾಗಿ ಅಂತಹ ಸನ್ನಿವೇಶವನ್ನು ಎದುರಿಸಲು ಆಕೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ’ ಎಂದು ಹೇಳಿದ್ದಾರೆ.
ಮುಟ್ಟಿನ ರಕ್ತದ ಕಲೆ ಸಮವಸ್ತ್ರ ಮತ್ತು ತಾನು ಕುಳಿತ ಬೆಂಚಿನ ಮೇಲೆ ಉಂಟಾದದ್ದಕ್ಕೆ ಕ್ಲಾಸ್ ಟೀಚರ್ ಮಾತ್ರವಲ್ಲದೆ ಪ್ರಾಂಶುಪಾಲರು ಕೂಡ ತಮ್ಮ ಆಫೀಸಿನಲ್ಲಿ ಹುಡುಗಿಯನ್ನು ಬೈದು ನಿಂದಿಸಿರುವುದಾಗಿ ತಿಳಿದು ಬಂದಿದೆ.