ಮುಂಬಯಿ: ಮಧ್ಯಮ ವೇಗಿ ವಿಜಯ್‌ಕುಮಾರ್ ಯೋ ಮಹೇಶ್ ತಮ್ಮ ಕ್ರಿಕೆಟ್ ಬದುಕಿನಲ್ಲೇ ಬಾರಿಸಿದ ಮೊದಲ ಸೆಂಚುರಿ ಸಾಹಸದಿಂದಾಗಿ ಆತಿಥೇಯ ಮುಂಬಯಿ ವಿರುದ್ಧದ ರಣಜಿ ಪಂದ್ಯದಲ್ಲಿ ತಮಿಳುನಾಡು ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಮುಂಬಯಿಯ 374ಕ್ಕೆ ಉತ್ತರವಾಗಿ 5ಕ್ಕೆ 239 ರನ್ ಮಾಡಿದ್ದ ತಮಿಳುನಾಡು, 3ನೇ ದಿನದಾಟದಲ್ಲಿ 450 ರನ್ ತನಕ ಬೆಳೆಯಿತು. 76 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಮುಂಬಯಿ ಒಂದು ವಿಕೆಟಿಗೆ 85 ರನ್ ಮಾಡಿದೆ. ಮಂಗಳವಾರ ಅಂತಿಮ ದಿನವಾದ ಕಾರಣ ಪಂದ್ಯ ಡ್ರಾಗೊಳ್ಳುವುದು ಬಹುತೇಕ ಖಚಿತ.
105 ರನ್ ಮಾಡಿದ್ದ ಬಾಬಾ ಇಂದ್ರಜಿತ್ ತಮಿಳುನಾಡಿಗೆ ಆಧಾರವಾಗಿ ನಿಂತಿದ್ದರು. ಆದರೆ ಸ್ಕೋರ್ 339 ರನ್ ಆಗಿದ್ದಾಗ 8ನೇ ವಿಕೆಟ್ ರೂಪದಲ್ಲಿ ಇಂದ್ರಜಿತ್ ಪೆವಿಲಿಯನ್ ಸೇರಿಕೊಳ್ಳುವುದರೊಂದಿಗೆ ಮುಂಬಯಿಯ ಇನ್ನಿಂಗ್ಸ್ ಲೀಡ್ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತೆಂದೇ ಭಾವಿಸಲಾಗಿತ್ತು. ಆದರೆ 9ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದು ಕ್ರೀಸಿಗೆ ಅಂಟಿಕೊಂಡು ನಿಂತ ಯೋ ಮಹೇಶ್ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನವೊಂದಕ್ಕೆ ಸಾಕ್ಷಿಯಾದರು. ಅಜೇಯ 103 ರನ್ ಬಾರಿಸಿ ಮುಂಬಯಿ ಬೌಲರ್‌ಗಳಿಗೆ ಬೆವರಿಳಿಸಿದರು (216 ಎಸೆತ, 9 ಬೌಂಡರಿ, 4 ಸಿಕ್ಸರ್). ಬಾಬಾ ಇಂದ್ರಜಿತ್ 152ರ ತನಕ ಬೆಳೆದರು (247 ಎಸೆತ, 14 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಮುಂಬಯಿ-374 ಮತ್ತು 1 ವಿಕೆಟಿಗೆ 85 (ಹೆರ್ವಾಡ್ಕರ್ ಬ್ಯಾಟಿಂಗ್ 24, ಅಯ್ಯರ್ ಬ್ಯಾಟಿಂಗ್ 56). ತಮಿಳುನಾಡು-450 (ಇಂದ್ರಜಿತ್ 152, ಯೋ ಮಹೇಶ್ ಔಟಾಗದೆ 103, ವಾಷಿಂಗ್ಟನ್ 69, ಗೋಹಿಲ್ 129ಕ್ಕೆ 4, ಕುಲಕರ್ಣಿ 50ಕ್ಕೆ 2, ಪಾರ್ಕರ್ 74ಕ್ಕೆ 2).