ಚೆನ್ನೈ: ಎರಡು ದಿನಗಳ ಮಳೆಯ ಅಬ್ಬರದ ರೆಡ್ ಅಲರ್ಟ್ ಸಿಕ್ಕಿದ್ದರಿಂದಾಗಿ, ದುಗುಡದಿಂದಲೇ ಬುಧವಾರದ ದಿನಚರಿ ಆರಂಭಿಸಿದ ಚೆನ್ನೈಗೆ ನಿರೀಕ್ಷಿಸಿದಂತೆ ಮುಸಲಧಾರೆ ಮಳೆ ಅಪ್ಪಳಿಸಿದೆ.
ಕಳೆದ ನಾಲ್ಕೈದು ದಿನದಿಂದ ಸುರಿದಿದ್ದ ಮಹಾ ಮಳೆಗೆ ತೊಯ್ದು ತೊಪ್ಪೆಯಾಗಿದ್ದ ಮಹಾನಗರಿಯಲ್ಲಿ ಮಂಗಳವಾರ ಸುರಿದ ಮತ್ತೂಂದು ಮಹಾ ಮಳೆಯಿಂದಾಗಿ ಅಕ್ಷರಶಃ ನೀರಿನ ರಾಡಿಯಲ್ಲಿ ಮುಳುಗಿಹೋಗಿದೆ. ಮಳೆ ಅಥವಾ ಮಳೆ ಸಂಬಂಧಿ ಅವಗಢಗಳಿಂದ ಸಾವಿಗೀಡಾದವರ ಸಂಖ್ಯೆ 11ಕ್ಕೇರಿದೆ.
ಚೆನ್ನೈ ಮತ್ತು ಸುತ್ತಲಿನ ಪ್ರದೇಶಗಳು ಹಾಗೂ ಕೆಲವು ಜಿಲ್ಲೆ, ತಾಲೂಕು ಪ್ರಾಂತ್ಯಗಳಿಗೂ ಮಳೆ ಆವರಿಸಿದೆ. ರಾತ್ರಿ 8 ಗಂಟೆಯ ಹೊತ್ತಿಗೆ ಚೆನ್ನೈನಲ್ಲಿ 33.5 ಮಿ.ಮೀ., ಎನ್ನೋರ್ ಬಂದರಿನಲ್ಲಿ 45 ಮಿ.ಮೀ., ಚೆಯ್ಯೂರ್‌ನಲ್ಲಿ 38, ಎಂಆರ್‌ಸಿ ನಗರ್‌ನಲ್ಲಿ 29, ತಿರೂರ್‌ನಲ್ಲಿ 29, ತಾರಾಮಣಿಯಲ್ಲಿ 23.5, ತಿರುಕೊಯಿಲೂರ್‌ನಲ್ಲಿ 9, ವೆಸ್ಟ್ ತಂಬರಂನಲ್ಲಿ 13, ಪರಂಜಿಪೆಟ್ಟೈನಲ್ಲಿ 16 ಸೆಂ.ಮೀ. ಮಳೆಯಾಗಿದೆ. ತೀವ್ರ ಹಾನಿಯಾಗಿರುವ ಕಡೆಗಳಲ್ಲಿ ಎನ್‌ಡಿಆರ್‌ಎಫ್ ತುಕಡಿಯನ್ನು ಪರಿಹಾರ ಕಾರ್ಯಗಳಿಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ:ಲವ್ಲಿನಾರನ್ನು ನೇರವಾಗಿ ವಿಶ್ವಕೂಟಕ್ಕೆ ಆಯ್ಕೆ ಮಾಡಿದ್ದೇಕೆ?
ಮಳೆಯಿಂದ ಹಾನಿಗೀಡಾದ ಜಿಲ್ಲೆಗಳಿಗೆ 10 ಐಎಎಸ್ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿರುವ ತಮಿಳುನಾಡು ರಾಜ್ಯ ಸರ್ಕಾರ, ಆ ಪ್ರಾಂತ್ಯಗಳಲ್ಲಿ ಕೈಗೊಳ್ಳಲಾಗಿರುವ ಪರಿಹಾರ ಕಾರ್ಯಗಳ ಸಮನ್ವಯಧಾರಿಗಳಾಗಿ ನೇಮಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಮತ್ತಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ದಕ್ಷಿಣ, ಪುದುಚ್ಚೇರಿಯಲ್ಲಿ ಮತ್ತಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.