Advertisement
ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್ ಸೈಕ್ಲೋನ್ ಮಂಗಳವಾರ ಮಧ್ಯಾಹ್ನ ನೆಲ್ಲೂರು ಮತ್ತು ಮಚಲಿಪಟ್ಟಣಂ ಮಧ್ಯೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಧಾರಾಕಾರ ಮಳೆಯಿಂದಾಗಿ ತಮಿಳುನಾಡಿನಲ್ಲಿ ಒಟ್ಟು ಐವರು ಅಸುನೀಗಿದ್ದಾರೆ. ಮಿಚಾಂಗ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯು ತನ್ನ 21 ತಂಡಗಳನ್ನು ತ.ನಾಡು, ಆಂಧ್ರ ಮತ್ತು ಪುದುಚೇರಿಯಲ್ಲಿ ನಿಯೋಜಿಸಿದೆ. 8 ಹೆಚ್ಚುವರಿ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ವಿಮಾನ ನಿಲ್ದಾಣಕ್ಕೂ ನುಗ್ಗಿದ ನೀರು: ಭಾರೀ ಮಳೆಯಿಂದ ಚೆನ್ನೈ ವಿಮಾನ ನಿಲ್ದಾಣದ ರನ್‌ವೇ ಜಲಾವೃತವಾಗಿದೆ. ವಿಮಾನಗಳ ಸಂಚಾರವೂ ಅಸ್ತವ್ಯಸ್ತವಾಗಿದೆ. 70 ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಹಲವು ವಿಮಾನಗಳ ಪಥ ಬದಲಿಸಲಾಗಿದೆ. ಕೆಲವು ವಿಮಾನಗಳ ಮಾರ್ಗ ಬದಲಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೆಡೆಗೆ ಕಳುಹಿಸಲಾಗಿದೆ. ಪ್ರಯಾಣಿಕರ ಸುರಕ್ಷೆ ಹಿನ್ನೆಲೆಯಲ್ಲಿ ತ.ನಾಡಿನಾದ್ಯಂತ ರೈಲುಗಳ ಸೇವೆಗಳನ್ನು ರದ್ದು ಮಾಡಲಾಗಿದೆ. ಕೊಚ್ಚಿ ಹೋದ ಕಾರುಗಳು: ಭಾರೀ ಮಳೆಯಿಂದ ಚೆನ್ನೈಯ ರಸ್ತೆಗಳೆಲ್ಲ ಜಲಾವೃತವಾಗಿದ್ದು, ಕಾರು ಸೇರಿದಂತೆ ರಸ್ತೆಗಳಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳು ಕೊಚ್ಚಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರ ಜತೆಗೆ ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ಮೊಸಳೆಯೊಂದು ರಸ್ತೆಗೆ ಬಂದಿರುವ ವೀಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿ ಜನರನ್ನು ಬೆಚ್ಚಿ ಬೀಳಿಸಿದೆ.