ಚೆನ್ನೈ: ದೇಶಾದ್ಯಂತ ಬಿಸಿಲ ಝಳ ಹೆಚ್ಚಾಗಿದ್ದು, ಜನರು ಸೆಖೆಯಿಂದ ತತ್ತರಿಸುವಂತಾಗಿದೆ. ಏತನ್ಮಧ್ಯೆ ತಮಿಳುನಾಡಿನಲ್ಲಿಯೂ ಬಿಸಿಲ ತಾಪ ಹೆಚ್ಚಾಗಿದ್ದ ಪರಿಣಾಮ ಯುವಕನೊಬ್ಬ ಸ್ಕೂಟರ್ ಸವಾರಿ ಮಾಡುತ್ತಲೇ ಸ್ನಾನ ಮಾಡುತ್ತಿದ್ದು, ಇದನ್ನು ವಿಡಿಯೋ ರೆಕಾರ್ಡ್ ಮಾಡುವಂತೆ ತನ್ನ ಗೆಳೆಯನಿಗೆ ತಿಳಿಸಿದ್ದ…ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಸಂಕಷ್ಟ ಎದುರಿಸಿದ ಪ್ರಸಂಗ ನಡೆದಿದೆ.
ಇದನ್ನೂ ಓದಿ:ಒಂದು ಸೀರೆ ಉಡಿಸಲು 2 ಲಕ್ಷ ರೂ.. ಅಂದು ಸಾರಿಯನ್ನು ದ್ವೇಷಿಸುತ್ತಿದ್ದಾಕೆ ಇಂದು ಲಕ್ಷಾಧಿಪತಿ
ಏನಿದು ಘಟನೆ?
ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ೧೫ ಸೆಕೆಂಡ್ಸ್ ಗಳ ವಿಡಿಯೋದಲ್ಲಿ, ಹಾಫ್ ಪ್ಯಾಂಟ್, ಟೀ ಶರ್ಟ್ ಧರಿಸಿದ ಯುವಕನೊಬ್ಬ ಬಿಳಿ ಬಣ್ಣದ ಸ್ಕೂಟರ್ ಅನ್ನು ಚಲಾಯಿಸುತ್ತಿದ್ದ. ಕಾಲಿನ ಮಧ್ಯದಲ್ಲಿ ಒಂದು ಬಕೆಟ್ ನೀರು ಇಟ್ಟುಕೊಂಡಿದ್ದು, ಒಂದು ಮಗ್ ನಲ್ಲಿ ನೀರನ್ನು ತೆಗೆದುಕೊಂಡು ಮೈಮೇಲೆ ಸುರಿದುಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ತಾನು ಸ್ಕೂಟರ್ ನಲ್ಲಿ ತೆರಳುತ್ತ, ಸ್ನಾನ ಮಾಡುತ್ತಿರುವ ದೃಶ್ಯದ ವಿಡಿಯೋವನ್ನು ಸೆರೆ ಹಿಡಿಯುವಂತೆ ಗೆಳೆಯನಿಗೆ ತಿಳಿಸಿದ್ದ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ತನಿಖೆ ನಡೆಸಿದ್ದು, ಅರುಣಾಚಲಂ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ ಪ್ರಸನ್ನ ಎಂಬಾತನನ್ನು ಪತ್ತೆ ಹಚ್ಚಿ ತಲಾ ಎರಡು ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ವಿವರಿಸಿದೆ.
ಇತರ ಸವಾರರಿಗೆ ಅಪಾಯಕಾರಿಯಾಗುವಂತೆ ನಡೆದುಕೊಂಡ ಇಬ್ಬರಿಗೂ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೆನ್ನೈನಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. 40 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲ ತಾಪಮಾನವಿದ್ದು, ಈ ವಾರವಿಡೀ ಬಿಸಿಲ ಝಳ ಹೆಚ್ಚಳವಾಗಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.