ಚೆನ್ನೈ: ಡಿಎಂಕೆ ಶಾಸಕರ ಕೋಲಾಹಲ, ಆಕ್ರೋಶದ ಹಿನ್ನೆಲೆಯಲ್ಲಿ ಡಿಎಂಕೆ ಸದಸ್ಯರನ್ನು ಸದನದಿಂದ ಹೊರಹಾಕಿದ ನಂತರ ತಮಿಳುನಾಡು ವಿಧಾನಸಭೆ ಕಲಾಪ ಪುನರಾರಂಭಗೊಂಡಾಗ, ಸ್ಪೀಕರ್ ಧನಪಾಲ್ ಅವರು ವಿಶ್ವಾಸಮತ ನಿರ್ಣಯಕ್ಕೆ ಧ್ವನಿಮತದ ಮೂಲಕ ಅವಕಾಶ ನೀಡಿದ್ದರು. ಕೊನೆಗೂ ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತ ಯಾಚನೆಯ ಅಗ್ನಿಪರೀಕ್ಷೆಯಲ್ಲಿ ಜಯಗಳಿಸುವ ಮೂಲಕ ಮುಖ್ಯಮಂತ್ರಿ ಸ್ಥಾನ ಭದ್ರವಾದಂತಾಗಿದೆ.
ವಿಶ್ವಾಸಮತ ಯಾಚನೆ ವೇಳೆ ಕಲಾಪದಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿ 133 ಮಂದಿ ಶಾಸಕರು ಹಾಜರಿದ್ದರು, ಬಹುಮತ ಸಾಬೀತಿಗೆ 67 ಮ್ಯಾಜಿಕ್ ನಂಬರ್ ನ ಅಗತ್ಯವಿತ್ತು. ಬಳಿಕ ನಡೆದ ಧ್ವನಿ ಮತದಲ್ಲಿ ಪಳನಿಸ್ವಾಮಿ ಜಯಗಳಿಸಿರುವುದಾಗಿ ಸ್ಪೀಕರ್ ಧನಪಾಲ್ ಘೋಷಿಸಿದರು.
ಧ್ವನಿಮತದಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಪರ 122 ಶಾಸಕರು ಮತ ಚಲಾಯಿಸಿದ್ದರೆ, ಪಳನಿಸ್ವಾಮಿ ವಿರುದ್ಧವಾಗಿ 11 ಶಾಸಕರು ಮತ ಚಲಾಯಿಸಿದ್ದರು. ಇದರಿಂದಾಗಿ ಬಂಡಾಯದ ಬಾವುಟ ಹಾರಿಸಿದ್ದ ಓ ಪನ್ನೀರ್ ಸೆಲ್ವಂಗೆ ಮುಖಭಂಗವಾಗಿದೆ.
ಸದನದಲ್ಲಿ ಪಳನಿಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ಎಐಎಡಿಎಂಕೆ ಶಾಸಕರು ಮಾತ್ರ ಹಾಜರಿದ್ದರು. ಪಕ್ಷದ ಶಾಸಕರು ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರನ್ನು ಬೆಂಬಲಿಸಿದಂತಾಗಿದೆ. ವಿಶ್ವಾಸಮತ ಯಾಚನೆ ವೇಳೆ ವಿರೋಧ ಪಕ್ಷವಾದ ಡಿಎಂಕೆಯ 88 ಶಾಸಕರನ್ನು ಸದನದಿಂದ ಹೊರಹಾಕಲಾಗಿತ್ತು. ಬಳಿಕ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಹಾಗೂ ಐಯುಎಂಎಲ್ ನ ಒಬ್ಬರು ಶಾಸಕ ಕಲಾಪ ಬಹಿಷ್ಕರಿಸಿ ಹೊರನಡೆದಿದ್ದರು.
ಶನಿವಾರ ಬೆಳಗ್ಗೆ 11ಗಂಟೆಗೆ ಕಲಾಪ ಆರಂಭಗೊಂಡಾಗ ಹೊಡೆದಾಟ, ಕೋಲಾಹಲದಿಂದಾಗಿ ಸ್ಪೀಕರ್ ಧನಪಾಲ್ ಅವರು 2 ಬಾರಿ ಕಲಾಪವನ್ನು ಮುಂದೂಡಿದ್ದರು. ಓ ಪನ್ನೀರ್ ಸೆಲ್ವಂ ಹಾಗೂ ಡಿಎಂಕೆ ಶಾಸಕರು ಗುಪ್ತ ಮತದಾನ ನಡೆಸುವಂತೆ ಆಗ್ರಹಿಸಿದ್ದರು. ಆದರೆ ಸ್ಪೀಕರ್ ಗುಪ್ತ ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಕೋಲಾಹಲ ನಡೆಸಿದ ಡಿಎಂಕೆ ಶಾಸಕರು ಸ್ಪೀಕರ್ ಅವರ ಬಳಿ ಘೇರಾವ್ ಹಾಕಿ ಟೇಬಲ್ ಅನ್ನು ಎತ್ತಿ ಎಸೆದು ಗೂಂಡಾಗಿರಿ ಪ್ರದರ್ಶಿಸಿದ್ದ ಘಟನೆ ನಡೆದಿತ್ತು.