ಚೆನ್ನೈ: ಚಿಕನ್ ಶವರ್ಮಾ ತಿಂದು ಫುಡ್ ಪಾಯ್ಸನ್ ಉಂಟಾದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ತಮಿಳುನಾಡಿನ ನಾಮಕ್ಕಲ್‌ನಲ್ಲಿ ಸೋಮವಾರ(ಸೆ.18 ರಂದು) ನಡೆದಿದೆ.
ಸೋಮವಾರ ಬಾಲಕಿಯ ತಂದೆ ರೆಸ್ಟೋರೆಂಟ್ ವೊಂದರಿಂದ ಚಿಕನ್ ಶವರ್ಮಾ ಸೇರಿದಂತೆ ಇತರೆ ಮಾಂಸಾಹಾರಿ ಆಹಾರವನ್ನು ತಂದಿದ್ದರು. ಇದನ್ನು ಸೇವಿಸಿದ ಬಳಿಕ ಅದೇ ದಿನ ರಾತ್ರಿ ಬಾಲಕಿಗೆ ಫುಡ್ ಪಾಯ್ಸನ್ ಉಂಟಾದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದ ಬಾಲಕಿ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪೊಲೀಸರಿಗೆ ಬಾಲಕಿಯ ಮನೆಯವರು ದೂರು ನೀಡಿದ್ದಾರೆ. ಇದೇ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಪೊಲೀಸರು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ. ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಆಹಾರ ಸುರಕ್ಷತೆ ತಂಡ ಭೇಟಿ ನೀಡಿ ಚಿಕನ್ ಎಲ್ಲಿಂದ ತಂದಿದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.