ಚೆನ್ನೈ: ಮನೆಯ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಳ್ಳುವ ವೇಳೆ ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಆರ್ ಡಿಎಕ್ಸ್ ಸ್ಫೋಟಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು; ಎನ್ಐಎ ತನಿಖೆ
ಕಲ್ಲಕುರುಚಿ ಜಿಲ್ಲೆಯ ಕಲ್ವರಾಯನ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿರುವ ಬುಡಕಟ್ಟು ನಿವಾಸಿಯ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮನೆ ಮಾಲೀಕ ರಾಜಾ, ಆತನ ಪತ್ನಿ ಹಾಗೂ ಹತ್ತು ತಿಂಗಳ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.
ವರದಿಗಳ ಪ್ರಕಾರ, ಕಳೆದ ರಾತ್ರಿ ರಾಜಾ ಪತ್ನಿ ಗ್ಯಾಸ್ ಒಲೆ ಮೇಲೆ ಹಾಲನ್ನು ಇಟ್ಟು ಕುದಿಸುತ್ತಿದ್ದರು. ನಂತರ ಆಕೆ ಪಕ್ಷದ ಮನೆಗೆ ತೆರಳಿದ್ದಳು. ಆದರೆ ಆಕೆ ಗ್ಯಾಸ್ ಒಲೆ ಮೇಲೆ ಹಾಲು ಕುದಿಯುತ್ತಿರುವುದು ಮರೆತು ಬಿಟ್ಟಿದ್ದಳು. ಅದರ ಪರಿಣಾಮ ಹುಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಪಾಯ ಅರಿತ ರಾಜಾ, ಮಗು, ಪತ್ನಿ ಹಾಗೂ ನೆರೆಹೊರೆಯವರು ಮನೆ ಬಿಟ್ಟು ದೂರ ಹೋಗಿದ್ದು, ಅಷ್ಟರಲ್ಲಿ ಮನೆಯೊಳಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ಮನೆ ಸುಟ್ಟು ಭಸ್ಮವಾಗಿ ಹೋಗಿರುವುದಾಗಿ ವರದಿ ತಿಳಿಸಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳುವ ಹೊತ್ತಿನಲ್ಲಿ ಯಾರು ಇಲ್ಲದಿದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿರುವುದಾಗಿ ವರದಿ ತಿಳಿಸಿದೆ.