ಬೆಂಗಳೂರು: ಮೇಕೆದಾಟು ಯೋಜನೆ ಮತ್ತು ಕಾವೇರಿ ವಿಚಾರದಲ್ಲಿ ಪದೇ ಪದೇ ತಮಿಳುನಾಡು ತಕರಾರು ಮಾಡುತ್ತಿದೆ,ತಮಿಳು ನಾಡು ಸಿಎಂ ಒಕ್ಕೂಟದ ವ್ಯವಸ್ಥೆ ವಿರುದ್ಧ ನಿಂತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ವರದಿಯಾದಂತೆ ತಮಿಳುನಾಡು ಸಿಎಂ ಸ್ಟಾಲಿನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.ಕಾವೇರಿ ಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡದಂತೆ ಪತ್ರ ಬರೆದಿದ್ದಾರೆ.ಆ ಪತ್ರವೆ ಕಾನೂನು ವಿರೋಧವಾಗಿದೆ.4.5 ಟಿಎಂಸಿ ನೀರನ್ನ ಬೆಂಗಳೂರಿಗೆ ಕುಡಿಯಲು ಬಳಸಿಕೊಳ್ಳುವ ಯೋಜನೆ ಇದಾಗಿದೆ. ಅದಕ್ಕೆ ವಿರೋಧ ಮಾಡುವುದು ಸರಿಯಲ್ಲ ಎಂದರು.
ತಮಿಳುನಾಡಿಗೆ ಕೋರ್ಟ್ ಆದೇಶದಂತೆ ನೀರನ್ನು ಕೊಡುತ್ತಿದ್ದೇವೆ. ಅವರ ಒಂದು ಹನಿ ನೀರನ್ನೂ ನಾವು ಬಳಕೆ ಮಾಡಿಕೊಂಡಿಲ್ಲ.ಒಕ್ಕೂಟದ ವ್ಯವಸ್ಥೆಯಲ್ಲಿ ತಮಿಳುನಾಡು ಆಕ್ಷೇಪ ಮಾಡಬಾರದು. ದೇಶದ 30 ರಾಜ್ಯದ ಜನ, ವಿವಿಧ ದೇಶದ ಜನ ಇಲ್ಲಿ ವಾಸವಾಗಿದ್ದಾರೆ.ಸ್ಟ್ಯಾಲಿನ್ ಪತ್ರ ಬರೆಯುವಾಗ ಒಕ್ಕೂಟದ ವ್ಯವಸ್ಥೆ ವಿರುದ್ಧ ನಿಂತಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ ಕೇಂದ್ರ ಜಲಶಕ್ತಿ ಕೂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕ್ಕೆ ಸ್ಪಷ್ಟವಾಗಿ ಹೇಳಿದೆ.ಈಗ ಚರ್ಚೆ ಆಗಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಾಧಿಕಾರದ ಗಮನಕ್ಕೆ ತಂದಿದ್ದೇವೆ. ಜೂನ್ 17ರಂದು ಸಭೆ ಇತ್ತು. ಪ್ರಧಾನಿ ಪ್ರವಾಸ ಇರುವುದರಿಂದ ಆಚೀಚೆಗೆ ಆಗಿ 23ಕ್ಕೆ ದಿನಾಂಕ ನಿಗದಿಯಾಗಬಹುದು ಎಂದರು.
ಇದನ್ನೂ ಓದಿ : ಪರಿಷ್ಕೃತ ಪಠ್ಯಪುಸ್ತಕವು ಬಿಜೆಪಿ ಹಾಗೂ ಆರೆಸ್ಸೆಸ್ ನ ಭಿತ್ತಿ ಪತ್ರ: ಪ್ರಿಯಾಂಕ್ ಖರ್ಗೆ ಆರೋಪ
ಕಾಂಗ್ರೆಸ್ ಪರಿಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ದೇಶದಲ್ಲಿ 50ವರ್ಷ ಆಡಳಿತ ನಡೆಸಿದ್ದಾರೆ. ಅವರ ಸಲಹೆ ಬೇಕು ಅಂದಾಗ ಪಡೆಯುತ್ತೇವೆ. ಅಗತ್ಯ ಬಿದ್ದಾಗ ಅವರನ್ನೂ ಕರೆದು ಮಾತನಾಡಿದ್ದೇವೆ. ಅಗತ್ಯ ಬಿದ್ದಗಾ ಕರೆದು ಮಾತನಾಡಿಸುತ್ತೇವೆ. ನಾಳೆ ನಾಡಿದ್ದು ದೆಹಲಿ ಪ್ರವಾಸ ಹೋಗುತ್ತಿದ್ದೇನೆ. ನಾಲ್ಕು ಸಚಿವಾಲಯಗಳ ಜೊತೆಯಲ್ಲಿ ಚರ್ಚೆ ಮಾಡಲು ಸಮಯ ಕೇಳಿದ್ದೇನೆ. ಮೇಕೇದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.