ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಏಳು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸುವ ಬಗ್ಗೆ ತಮಿಳುನಾಡು ಸರ್ಕಾರದ 2018ರ ಶಿಫಾರಸನ್ನು ಅಂಗೀಕರಿಸಿ, ಆದೇಶವನ್ನು ಹೊರಡಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಕೋವಿಡ್ ವಿರುದ್ಧದ ಹೋರಾಟಕ್ಕೆ ಸ್ಯಾಮ್‌ಸಂಗ್ ಇಂಡಿಯಾ ಸಹಾಯ ಹಸ್ತ
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ತಕ್ಷಣವೇ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಒತ್ತಾಯಿಸಿರುವ ಸ್ಟಾಲಿನ್, ಸುಮಾರು ಮೂರು ದಶಕಗಳಿಂದ ಜೈಲುವಾಸದ ಶಿಕ್ಷೆ ಅನುಭವಿಸಿರುವುದಾಗಿ ವಾದಿಸಿದ್ದಾರೆ.
ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಆರೋಪಿಗಳಾದ ಎಸ್.ನಳಿನಿ, ಮುರುಗನ್, ಸಂಥಾನ್, ಎಜಿ ಪೆರಾರಿವಳನ್, ಜಯಕುಮಾರ್, ರಾಬರ್ಟ್ ಪಾಯಸ್ ಮತ್ತು ಪಿ.ರವಿಚಂದ್ರನ್ ಬಿಡುಗಡೆಗೆ ತಮಿಳುನಾಡು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.
ರಾಜೀವ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೊಳಗಾದ ನಳಿನಿ ಹಾಗೂ ಇತರ ಮೂವರು ಆರೋಪಿಗಳ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆಗೆ ಇಳಿಸಿತ್ತು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
1991ರ ಮೇ 21ರಂದು ಚುನಾವಣಾ ಪ್ರಚಾರ ರಾಲಿಯಲ್ಲಿ ಭಾಗಿಯಾಗಿದ್ದ ರಾಜೀವ್ ಗಾಂಧಿಯನ್ನು ತಮಿಳುನಾಡಿನ ಶ್ರೀಪೆರಂಬುದೂರ್ ನಲ್ಲಿ ಧನು ಎಂಬ ಆತ್ಮಹತ್ಯಾ ಬಾಂಬರ್ ದಾಳಿಯ ಮೂಲಕ ಹತ್ಯೆಗೈದಿದ್ದಳು. ಈ ಪ್ರಕರಣದಲ್ಲಿ ಸಂಚು ರೂಪಿಸಿದ್ದ ಈ ಏಳು ಮಂದಿಯನ್ನು ನಂತರ ಬಂಧಿಸಲಾಗಿತ್ತು.