ಚೆನ್ನೈ: ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಮುಂದುವರಿದಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ (ಜುಲೈ 27) ನಡೆದಿದ್ದು, ಕಳೆದ ಎರಡು ವಾರಗಳ ಅವಧಿಯಲ್ಲಿ ಇದು ಐದನೇ ಪ್ರಕರಣವಾಗಿದೆ.
ಇದನ್ನೂ ಓದಿ:ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದಲೂ ರಾಹುಲ್ ಹೊರಗುಳಿಯುವ ಸಾಧ್ಯತೆ
ಚೆನ್ನೈಯಲ್ಲಿನ ಶಿವಗಂಗಾ ಜಿಲ್ಲೆಯಲ್ಲಿನ ಮನೆಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಕೋಣೆಯಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು, ತನಗೆ ಗಣಿತ ಮತ್ತು ಜೀವಶಾಸ್ತ್ರ ಪಠ್ಯದಲ್ಲಿ ತುಂಬಾ ಕಷ್ಟವಾಗುತ್ತಿತ್ತು ಎಂದು ಬರೆದಿಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜು.13ರಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದರು.
ಕಳೆದ ಎರಡು ವಾರಗಳಲ್ಲಿ ದ್ವಿತೀಯ ಪಿಯುಸಿಯ ಮೂವರು ವಿದ್ಯಾರ್ಥಿನಿಯರು ಹಾಗೂ ಪ್ರಥಮ ಪಿಯುಸಿಯ ಒಬ್ಬಳು ವಿದ್ಯಾರ್ಥಿನಿ ಸೇರಿದಂತೆ ಒಟ್ಟು ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.