ಹೊಸದಿಲ್ಲಿ: ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಅವರಿಗೆ ರವಿವಾರ ಭಾವಪೂರ್ಣ ವಿದಾಯ ಹೇಳಲಾಯಿತು. ಇತ್ತೀಚೆಗಷ್ಟೇ ತಮಿಳುನಾಡಿನ ಕೂನೂರಿನ ಬಳಿ ಹೆಲಿಕಾಪ್ಟರ್ ದುರಂತ ಸಂಭವಿಸಿ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಸೇರಿದಂತೆ 13 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಕರ್ನಾಟಕದ ಕಾರ್ಕಳದ ಅಳಿಯರೂ ಆಗಿರುವ ಲೆ| ಕ| ಹರ್ಜಿಂದರ್ ಸಿಂಗ್ ಅವರೂ ಒಬ್ಬರಾಗಿದ್ದಾರೆ. ಇವರು ಸಿಡಿಎಸ್‌ಗೆ ಸ್ಟಾಫ್ ಆಫೀಸರ್ ಆಗಿದ್ದರು.
ಹೊಸದಿಲ್ಲಿಯ ಬ್ರಾರ್ ಸ್ಕ್ವೇರ್ ಅಂತ್ಯಧಾಮದಲ್ಲಿ ಪೂರ್ಣ ಮಿಲಿಟರಿ ಗೌರವದೊಂದಿಗೆ ಲೆ| ಕ| ಹರ್ಜಿಂದರ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಿತು. ರಕ್ಷಣ ಸಚಿವ ರಾಜನಾಥ್ ಸಿಂಗ್, ರಕ್ಷಣ ಇಲಾಖೆಯ ಸಹಾಯಕ ಸಚಿವ ಅಜಯ್ ಭಟ್ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಲೆ| ಕ| ಹರ್ಜಿಂದರ್ ಸಿಂಗ್ ಅವರ ಪುತ್ರಿ ಪ್ರೀತ್ ಕೌರ್ ಅಂತ್ಯಕ್ರಿಯೆಯ ವಿಧಿವಿಧಾನ ನಡೆಸಿದರು.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
ಲೆ| ಕ| ಹರ್ಜಿಂದರ್ ಸಿಂಗ್ ಅವರ ಪತ್ನಿ ನಿವೃತ್ತ ಮೇ| ಆ್ಯಗ್ನೆಸ್ ಪ್ರಫುಲ್ಲಾ ಮಿನೇಜಸ್ ಮತ್ತು ಪುತ್ರಿ ಪ್ರೀತ್ ಕೌರ್ ಅವರಿಗೆ ರಕ್ಷಣ ಸಚಿವ ರಾಜನಾಥ್ ಸಿಂಗ್, ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ, ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಮತ್ತು ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಮತ್ತು ಇತರ ಅಧಿಕಾರಿಗಳು ಸಾಂತ್ವನ ಹೇಳಿದರು.
ಅಂತ್ಯಕ್ರಿಯೆ ಬಳಿಕ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ಲೆ| ಕ| ಹರ್ಜಿಂದರ್ ಸಿಂಗ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಲೆ| ಕ| ಹರ್ಜಿಂದರ್ ಸಿಂಗ್ ಅವರು, ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾವು ಅತ್ಯಂತ ದುಃಖಕರ. ಲೆ| ಕ| ಹರ್ಜಿಂದರ್ ಸಿಂಗ್ ಅವರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕುಟುಂಬಸ್ಥರಿಗೆ ನೀಡಲಿ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.