ಚೆನ್ನೈ: ನಮ್ಮಲ್ಲಿ ಕೆಲವೊಂದು ಸರ್ಕಾರದ ಅಭಿವೃದ್ಧಿ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಇನ್ನು ಕೆಲವೊಂದು ಆರಂಭಗೊಳ್ಳುತ್ತದೆ ಆದರೆ ನಿಗದಿತ ಸಮಯಕ್ಕೆ ಪೂರ್ತಿಗೊಳ್ಳುವುದಿಲ್ಲ.
ತಮಿಳುನಾಡಿನಲ್ಲಿ ಮಳೆಯಿಂದ ಹಾನಿಗೊಂಡ ಸೇತುವೆಯೊಂದನ್ನು ದುರಸ್ತಿಗೊಳಿಸಲು ಅಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರು ವಿಭಿನ್ನವಾಗಿ ಬೋರ್ಡ್‌ವೊಂದನ್ನು ಹಾಕಿದ್ದಾರೆ.
ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಡಿಸೆಂಬರ್ 2, 2019 ರಂದು ಮಳೆಯಿಂದಾಗಿ ಸೇತುವೆಯೊಂದು ಹಾನಿಗೊಳಗಾಗಿದೆ. ನಾಲ್ಕು ವರ್ಷ ಕಳೆದರೂ ಸೇತುವೆ ಇನ್ನೂ ಕೂಡ ದುರಸ್ತಿಗೊಂಡಿಲ್ಲ. ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಅದಕ್ಕೆ ಪೂರಕವಾಗಿ ಯಾವ ಕ್ರಮವನ್ನು ಅಧಿಕಾರಿಗಳು ಕೈಗೊಂಡಿಲ್ಲ.
ಈ ಕಾರಣದಿಂದ ಗ್ರಾಮಸ್ಥರು ಹಾನಿಗೊಂಡ ಸೇತುವೆಗೆ ʼಶ್ರದ್ಧಾಂಜಲಿʼ ಅರ್ಪಿಸಿ, ಬೋರ್ಡ್‌ವೊಂದನ್ನು ರಸ್ತೆಬದಿ ಹಾಕಿದ್ದಾರೆ. ಸೇತುವೆ ದುರಸ್ತಿಯಾಗದೆ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು, ವಿದ್ಯಾರ್ಥಿಗಳು, ತಾಯಂದಿರು, ಸಾರ್ವಜನಿಕರು ಮತ್ತು ಅಗತ್ಯ ಸೇವಾ ಕಾರ್ಯಕರ್ತರ ಪರವಾಗಿ ನಾವು ನಮ್ಮ ವಿಷಾದವನ್ನು ವ್ಯಕ್ತಪಡಿಸುತ್ತೇವೆ ಎಂದು ಬೋರ್ಡ್ ನಲ್ಲಿ ಬರೆಯಲಾಗಿದೆ.
ಇದನ್ನು ನೋಡಿಯಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಬಂದು ಸೇತುವೆಯನ್ನು ದುರಸ್ತಿ ಮಾಡುತ್ತಾರೆ ಎನ್ನುವುದು ಗ್ರಾಮಸ್ಥರು ಹೇಳುವ ಮಾತು.
ಈ ಸೇತುವೆ ಕುರುಮಬನೂರಿನಿಂದ ಮೆಟ್ಟುಪಾಳಯಂಗೆ ಸಂಪರ್ಕಿಸುತ್ತದೆ. 2019ರಲ್ಲಿ ಸುರಿದ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾದ ಕಾರಣ ಹಾನಿಯಾಗಿದೆ.