ಬೆಂಗಳೂರು: ಕಾವೇರಿ ನದಿಗೆ ತಮಿಳು ನಾಡು ಗಡಿ ಭಾಗದಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಸಾಕಷ್ಟು ಅನುಕೂಲ ಇದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಿ ಕೇಂದ್ರ ಜಲ ಆಯೋಗಕ್ಕೆ ಅನುಮತಿಗಾಗಿ ಕಳುಹಿಸಿಕೊಟ್ಟಿದ್ದೇವೆ. ಜೊತೆಗೆ ಅರಣ್ಯ ಇಲಾಖೆಯ ಅನುಮತಿಗೂ ಪ್ರಯತ್ನ ನಡೆಸಿದ್ದೇವೆ ಎಂದರು.
ಆದರೆ, ಯೋಜನೆ ಜಾರಿ ಕುರಿತು ಸುಪ್ರೀಂ ಕೋರ್ಟ್‌ಗೆ ಇನ್ನೂ ಮಾಹಿತಿ ನೀಡಿಲ್ಲ. ರಾಜ್ಯ ಕಾನೂನು ತಂಡದ ಅಭಿಪ್ರಾಯ ಪಡೆದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಈ ಯೋಜನೆಯಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆ ಹಿಡಿಯುವುದರಿಂದ ಬೆಂಗಳೂರು ಸೇರಿದಂತೆ ಸುತ್ತಲಿನ ನಗರಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗುವುದಷ್ಟೆ ಅಲ್ಲದೇ ಕಾವೇರಿ ನ್ಯಾಯ ಮಂಡಳಿ ಆದೇಶದಂತೆ ತಮಿಳು ನಾಡಿಗೆ ಪ್ರತಿ ತಿಂಗಳು ನೀರು ಬಿಡುವುದಕ್ಕೂ ಅನುಕೂಲವಾಗಲಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿಧಿವಶವಾಗದಿದ್ದರೆ, ಅವರಿಗೆ ಈ ಯೋಜನೆ ಸಾಧಕ ಬಾಧಕಗಳ ಕುರಿತು ನೇರವಾಗಿಯೇ ಭೇಟಿಯಾಗಿ ವಿವರಣೆ ನೀಡುತ್ತಿದ್ದೆ. ಈಗಲೂ ತಮಿಳು ನಾಡು ಜನತೆಗೆ ಯೋಜನೆಯ ಅನುಕೂಲತೆಯ ಬಗ್ಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಕೋರ್ಟ್ ಆದೇಶ ಪಾಲನೆಗೆ ತಮಿಳು ನಾಡಿಗೆ ನೀರು: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳು ನಾಡಿಗೆ ನೀರು ಬಿಡುತ್ತಿರುವುದನ್ನು ಸಮರ್ಥಿಸಿಕೊಂಡ ಸಚಿವ ಎಂ.ಬಿ. ಪಾಟೀಲ್, ರಾಜ್ಯದ ರೈತರ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದಿದ್ದರೆ, ಮುಂದೆ ವಿಚಾರಣೆ ವೇಳೆ ದೀರ್ಘಾವಧಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಲಿದೆ. ಜುಲೈ 10 ರಂದು ಸುಪ್ರೀಂ ಕೋರ್ಟ್ ಎದುರು ಕಾವೇರಿ ವಿವಾದ ಕುರಿತು ವಿಚಾರಣೆ ಬರಲಿದೆ. ಆ ಸಂದರ್ಭದಲ್ಲಿ ರಾಜ್ಯಸರ್ಕಾರ ಸಮರ್ಥವಾಗಿ ವಾದ ಮಾಡಲು ಈಗ ನೀರು ಬಿಡುವುದು ಅನಿವಾರ್ಯ ಎಂದರು.
ಮಳೆಗಾಲ ಆರಂಭದಲ್ಲಿ ಜೂನ್ ತಿಂಗಳಿಂದ ಸೆಪ್ಟಂಬರ್ ವರೆಗೆ ತಮಿಳುನಾಡಿಗೆ 134 ಟಿಎಂಸಿ ನೀರು ಬಿಡಬೇಕು. ನಮಗೆ ಅದೇ ದೊಡ್ಡ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಇದನ್ನೇ ವಿರೋದ ಮಾಡುತ್ತಿದೆ. ಜೂನ್ ತಿಂಗಳಲ್ಲಿ 34 ಟಿಎಂಸಿ ನೀರು ಕೆಆರ್‌ಎಸ್‌ಗೆ ಬಂದರೆ 10 ಟಿಎಂಸಿ ನೀರು ಬಿಡಬೇಕು. ಆದರೆ, ಇದುವರೆಗೂ ಕೆಆರ್‌ಎಸ್‌ಗೆ ಕೇವಲ 11 ಟಿಎಂಸಿ ನೀರು ಬಂದಿದೆ. ಅವರಿಗೆ 10 ಟಿಎಂಸಿ ನೀರು ಹೇಗೆ ಬಿಡಲು ಸಾಧ್ಯ. ಜುಲೈ ನಲ್ಲಿ 34 ಟಿಎಂಸಿ, ಆಗಸ್ಟ್‌ನಲ್ಲಿ 51 ಟಿಎಂಸಿ, ಸೆಪ್ಟಂಬರ್‌ನಲ್ಲಿ 20 ಟಿಎಂಸಿ ನೀರು ಬಿಡುವಂತೆ ಆದೇಶ ಮಾಡಲಾಗಿದೆ. ನಮ್ಮ ಜಲಾಶಯಕ್ಕೇ ನೀರು ಬರದಿದ್ದಾಗ ತಮಿಳುನಾಡಿಗೆ ಹೇಗೆ ನೀರು ಬಿಡುವುದು ಎಂದು ಪ್ರಶ್ನಿಸಿದರು.
ಇದೇ ವೇಳೆ, ಕಾವೇರಿ ಕೊಳ್ಳದ ರೈತರು ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಲಬೇಕು ಎಂದು ಮನವಿ ಮಾಡಿದ ಅವರು, ಮಾಧ್ಯಮಗಳೂ ಸಹ ರೈತರಿಗೆ ವಾಸ್ತವ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು. ಉತ್ತರ ಕರ್ನಾಟಕ ಭಾಗದ ಜಲಾಶಯಗಳು ಭರ್ತಿಯಾಗುತ್ತಿವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಇನ್ನೂ ಮಳೆ ಆಗುವ ವಿಶ್ವಾಸ ಇದೆ ಎಂದು ಹೇಳಿದರು.