ಚೆನ್ನೈ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿಎಂಕೆ ಸೇರಿದಂತೆ ವಿಪಕ್ಷಗಳು ಕರೆ ನೀಡಿದ ತಮಿಳುನಾಡು ಬಂದ್‌ಗೆ ಇಂದು ಮಂಗಳವಾರ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಬಂದ್ ವಾತಾವರಣ ಕಂಡು ಬಂದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ರೈತ ಸಂಘಟನೆಗಳು, ವ್ಯಾಪಾರಿಗಳ ಸಂಘಟನೆಗಳು, ಲಾರಿ ಮಾಲಕರು, ಕಾಂಗ್ರೆಸ್, ಕಮ್ಯುನಿಷ್ಟ್ ಪಕ್ಷಗಳು, ಮುಸ್ಲಿಂ ಲೀಗ್ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ನೀಡಿದ್ದು ,ಬಂದ್ ಯಶಸ್ವಿ ಎನ್ನುವ ವಾತಾವರಣ ಬೆಳಗ್ಗೆಯೆ ಕಂಡು ಬಂದಿದೆ.
ಬರಗಾಲದ ಹಿನ್ನಲೆಯಲ್ಲಿ ಬೆಳೆವಿಮೆ, ಸಾಮಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಈಡೇರಿಸಲು ಪಟ್ಟು ಹಿಡಿಯಲಾಗಿದೆ. ರಾಜ್ಯದೆಲ್ಲೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು ಹಲವರನ್ನು ಬಂಧಿಸಲಾಗಿದೆ. ರೈತರೊಂದಿಗೆ ಪ್ರತಿಭಟನೆಗಿಳಿದ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯದೆ ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿವೆ. ರಾಜ್ಯದೆಲ್ಲೆಡೆ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು , ಸರ್ಕಾರಿ ಬಸ್‌ಗಳ ಸಂಚಾರ ವಿರಳವಾಗಿದೆ. ಆಟೋ , ಟ್ಯಾಕ್ಸಿಗಳು ಸಂಚರಿಸುತ್ತಿಲ್ಲ. ಬಸ್‌ಸ್ಟಾಂಡ್‌ಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.
ಚಿತ್ರರಂಗವೂ ಬಂದ್‌ಗೆ ಬೆಂಬಲ ನೀಡಿದ್ದು , ದಿನದ ಮಟ್ಟಿಗೆ ಚಿತ್ರೀಕರಣ ಸ್ಥಗಿತಗೊಳಿಸಿದೆ. ಚಿತ್ರಮಂದಿರಗಳಲ್ಲೂ 2 ಪ್ರದರ್ಶನಗಳನ್ನು ನಡೆಸದೇ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗಿದೆ.