ಚೆನ್ನೈ: ಫ್ಯಾಕ್ಟರಿ ಆವರಣದೊಳಗೆ ಕೆಮಿಕಲ್ಸ್ ಮಿಶ್ರಣ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಶನಿವಾರ(ಜನವರಿ 01) ಶಿವಕಾಶಿ ಸಮೀಪದ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉಡುಪಿ ಶ್ರೀಕೃಷ್ಣ ದೇವರಿಗೆ:ಕಾಶೀ ಮಠಾಧೀಶರಿಂದ ಪಚ್ಚೆ ಕಲ್ಲಿನ ಸ್ವರ್ಣ ಹಾರ
ಹೊಸ ವರ್ಷಾಚರಣೆಯ ನಿಟ್ಟಿನಲ್ಲಿ ಸಂಪ್ರದಾಯದಂತೆ ಫ್ಯಾಕ್ಟರಿಯಲ್ಲಿ ಪೂಜೆ ನಡೆಸಿದ್ದೇ ಈ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ಫೋಟದ ಶಬ್ದದ ನಂತರ ಸ್ಥಳೀಯ ನಿವಾಸಿಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸುಮಾರು ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದಿಂದಾಗಿ ಫ್ಯಾಕ್ಟರಿಯೊಳಗಿನ ಮೂರು ಕೋಣೆಗಳು ಧ್ವಂಸಗೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ವಿವರ ಕಲೆ ಹಾಕುತ್ತಿರುವುದಾಗಿ ವರದಿ ಹೇಳಿದೆ.
ಘಟನಾ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದು, ಜೆಸಿಬಿ ಮೂಲಕ ಅವಶೇಷಗಳನ್ನು ಖಾಲಿ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.