ಚೆನ್ನೈ: ತಮ್ಮ ಮಗ, ಸ್ಟಾರ್ ನಟ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷದ ಹೆಸರನ್ನು ನೋಂದಾಯಿಸಿರುವುದರ ಹಿಂದಿನ ಉದ್ದೇಶ ಕೇವಲ ಆತನ ಅಭಿಮಾನಿಗಳನ್ನು ಹುರಿದುಂಬಿಸಲು ಮತ್ತು ಒಳ್ಳೆಯ ಉದ್ದೇಶ ಬೆಳೆಸುವುದಾಗಿದೆ ಎಂದು ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ತನ್ನ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ತಂದೆ ನೋಂದಾಯಿಸಿದ್ದಾರೆಂಬ ವಿಷಯ ಹರಿದಾಡುತ್ತಿರುವ ಸುದ್ದಿಯಿಂದ ನಟ ವಿಜಯ್ ದೂರ ಉಳಿದಿದ್ದು, ಇದೀಗ ತಂದೆಯೇ ಖುದ್ದಾಗಿ ವಿವರಣೆ ನೀಡಲು ಮುಂದಾಗಿರುವುದಾಗಿ ವರದಿ ಹೇಳಿದೆ.
1993ರಲ್ಲಿ ರಸಿಗರ್ ಮಂದ್ರಮ್ ಎಂಬ ಹೆಸರಿನಲ್ಲಿ ಅಭಿಮಾನಿಗಳ ಸಂಘವನ್ನು ವಿಜಯ್ ಹೆಸರಿನಲ್ಲಿ ಆರಂಭಿಸಲಾಗಿತ್ತು. ಬಳಿಕ ಇದು ಜನರ ಶ್ರೇಯೋಭಿವೃದ್ಧಿಯಲ್ಲಿ ತೊಡಗಿಕೊಂಡು ಮುಂದೆ ಜನರ ಚಳವಳಿಯಾಗಿ (ಮಕ್ಕಳ್ ಇಯಕ್ಕಂ) ಬೆಳೆಯಿತು ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಇದನ್ನೂ ಓದಿ:ಅಮೆರಿಕ ಮಹಾಸಮರ: ಬೈಡೆನ್ ಬೆಂಬಲಿಗರಿಂದ ನೃತ್ಯ, ಟ್ರಂಪ್ ಬೆಂಬಲಿಗರ ಕೈಯಲ್ಲಿ ಶಸ್ತ್ರಾಸ್ತ್ರ
ಅಭಿಮಾನಿಗಳ ಚಳವಳಿಯಲ್ಲಿ ಈಗಾಗಲೇ ಜನರ ಆಶೋತ್ತರಗಳನ್ನು ಈಡೇರಿಸುವ ಗುರಿಯೊಂದಿಗೆ ಕಾರ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಇದನ್ನು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಬೇಕೆಂಬ ಇಚ್ಛೆಯೊಂದಿಗೆ ಚುನಾವಣಾ ಆಯೋಗದಲ್ಲಿ ಹೆಸರನ್ನು ನೋಂದಾಯಿಸಲಾಗಿದೆ. ಇದು ಮುಂದಿನ ಪ್ರೋತ್ಸಾಹ ಮತ್ತು ಗುರುತಿಸುವಿಕೆಗೆ ಸಹಾಯಕವಾಗಬಲ್ಲದು ಎಂದು ಹೇಳಿದರು.
ಇಳಯ ದಳಪತಿ (ಯುವ ಕಮಾಂಡರ್) ವಿಜಯ್ ಮಕ್ಕಳ್ ಇಯಕ್ಕಂ ಅನ್ನು ರಾಜಕೀಯ ಪಕ್ಷವನ್ನಾಗಿ ಬದಲಾಯಿಸಬೇಕಾದ ಅಗತ್ಯವಿತ್ತು. ನನಗೆ ಅದು ಬೇಕಾಗಿದ್ದು, ಅದನ್ನು ಮಾಡಿದೆ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ.
ತನ್ನ ತಂದೆ ಚುನಾವಣಾ ಆಯೋಗದಲ್ಲಿ ನೋಂದಾಯಿಸಿರುವ ಪಕ್ಷದ ಜತೆ ನನಗೆ ಯಾವುದೇ ಸಂಬಂಧ ಇಲ್ಲ. ಅದು ನನ್ನ ತಂದೆ ನೋಂದಾಯಿಸಿರುವ ಹೆಸರು. ಹೀಗಾಗಿ ಅಭಿಮಾನಿಗಳು ಕೂಡಾ ಪಕ್ಷಕ್ಕೆ ಸೇರ್ಪಡೆಯಾಗಬಾರದು ಎಂದು ನಟ ವಿಜಯ್ ತನ್ನ ಅಭಿಮಾನಗಳಲ್ಲಿ ಮನವಿ ಮಾಡಿಕೊಂಡಿದ್ದ ಎಂದು ವರದಿ ಹೇಳಿದೆ.