ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರು ಗುರುವಾರ (ಆಗಸ್ಟ್ 22) ಬೆಳಗ್ಗೆ ತಮ್ಮ ರಾಜಕೀಯ ಪಕ್ಷವಾದ “ತಮಿಳಗ ವೇಟ್ರಿ ಕಳಗಂ”(Tamizhaga Vetri Kazahagam)ನ ಧ್ವಜದ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ನಟ ವಿಜಯ್ ಅವರು ಪಣಿಯೂರ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಧ್ವಜವನ್ನು ಬಿಡುಗಡೆಗೊಳಿಸಿ, ಬಳಿಕ ತಮ್ಮ ಪಕ್ಷದ ಅಧಿಕೃತ ಹಾಡನ್ನು(Song) ಬಿಡುಗಡೆಗೊಳಿಸಿದರು.
ಕುಂಕುಮ ಮತ್ತು ಹಳದಿ ಬಣ್ಣದ ಧ್ವಜದಲ್ಲಿ ಆನೆ ಮತ್ತು ನವಿಲು ಚಿತ್ರ ಧ್ವಜದಲ್ಲಿ ಇದ್ದು ಮಧ್ಯದಲ್ಲಿ ನಕ್ಷತ್ರಗಳು ಇವೆ. 2024ರ ಫೆಬ್ರುವರಿಯಲ್ಲಿ ತಮಿಳಗ ವೇಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿರುವುದಾಗಿ ನಟ ವಿಜಯ್ ಘೋಷಿಸುವ ಮೂಲಕ ತಮಿಳುನಾಡಿನ ರಾಜಕೀಯ ಪ್ರವೇಶಿಸಿದ್ದರು.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅಲ್ಲದೇ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಗ ವೇಟ್ರಿ ಕಳಗಂ ಯಾವುದೇ ರಾಜಕೀಯ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿಲ್ಲ.
ಧ್ವಜ ಬಿಡುಗಡೆಗೊಳಿಸಿ ಮಾತನಾಡಿದ ವಿಜಯ್, ನೀವೆಲ್ಲರೂ ನಮ್ಮ ಮೊದಲ ಸಭೆಯ ಬಗ್ಗೆ ಕಾತುರರಾಗಿದ್ದೀರಿ ಎಂಬುದು ತಿಳಿದಿದೆ. ಸಿದ್ಧತೆಗಳು ನಡೆಯುತ್ತಿದ್ದು, ಆ ಬಗ್ಗೆ ಶೀಘ್ರವೇ ಮಾಹಿತಿ ನೀಡುತ್ತೇನೆ. ಅದಕ್ಕೂ ಮೊದಲು ನಮ್ಮ ಪಕ್ಷದ ಧ್ವಜವನ್ನು ಇಂದು ಬಿಡುಗಡೆಗೊಳಿಸಿದ್ದೇನೆ. ತಮಿಳುನಾಡಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಾಗಿದೆ ಎಂದರು.
ತಮಿಳುನಾಡಿನ ಅಭಿವೃದ್ಧಿಗಾಗಿ ಪಣ ತೊಟ್ಟಿರುವುದಾಗಿ ಭರವಸೆ ನೀಡಿರುವ ನಟ ವಿಜಯ್, ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.