ಚೆನ್ನೈ: ತಮಿಳು ಸಿನಿಮಾ ಪ್ರೇಮಿಗಳ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮನೆಗೆ ಬಾಂಬ್ ಇಡಲಾಗಿದೆ ಎಂದು ಭಾನುವಾರ ಮಧ್ಯರಾತ್ರಿ ಚೆನ್ನೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆಯೊಂದು ಬಂದಿರುವುದಾಗಿ ವರದಿ ತಿಳಿಸಿದೆ.
ಚೆನ್ನೈನ ಸಾಲಿಗ್ರಾಮಂನಲ್ಲಿರುವ ನಟ ವಿಜಯ್ ಅವರ ಮನೆಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಕೊನೆಗೂ ಆ ಕರೆಯನ್ನು ಪತ್ತೆಹಚ್ಚಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಈ ಕರೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥ ಯುವಕನೊಬ್ಬ ಹುಸಿ ಬೆದರಿಕೆ ಕರೆ ಮಾಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಂಟ್ರೋಲ್ ರೂಂನಲ್ಲಿ ಕರೆ ಸ್ವೀಕರಿಸಿದ ತಕ್ಷಣವೇ ಪೊಲೀಸ್ ತಂಡ ಹಾಗೂ ಬಾಂಬ್ ಪತ್ತೆ ದಳ ವಿಜಯ್ ಮನೆಗೆ ದೌಡಾಯಿಸಿತ್ತು. ಮನೆಯ ಒಳಗೆ, ಸುತ್ತಮುತ್ತ ಹೀಗೆ ಎಲ್ಲೆಡೆ ಕೂಲಂಕಷವಾಗಿ ಪರಿಶೀಲಿಸಿದಾಗ ಬಾಂಬ್ ಪತ್ತೆಯಾಗಿಲ್ಲವಾಗಿತ್ತು.
ನಂತರ ದೂರವಾಣಿ ಕರೆ ಪತ್ತೆ ಹಚ್ಚಿದ್ದು, ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮರಕ್ಕಾನಂ ಎಂಬಲ್ಲಿಂದ ಮಾನಸಿಕ ಅಸ್ವಸ್ಥ ಯುವಕ ಹುಸಿ ಬೆದರಿಕೆ ಕರೆ ಮಾಡಿರುವುದಾಗಿ ತಿಳಿದು ಬಂದಿತ್ತು ಎಂದು ವರದಿ ತಿಳಿಸಿದೆ.21 ವರ್ಷದ ಮಾನಸಿಕ ಅಸ್ವಸ್ಥ ಯುವಕನ ಮನೆಯವರನ್ನು ಕರೆಯಿಸಿ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ. ಯುವಕನಿಗೆ ಈ ರೀತಿ ಪ್ರತಿಷ್ಠಿತ ವಿಐಪಿಗಳಿಗೆ ಹುಸಿ ಬೆದರಿಕೆ ಕರೆ ಮಾಡುವ ಚಟ ಇದ್ದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.