ಚೆನ್ನೈ: ಕಾಲಿವುಡ್ ಸಿನಿಮಾರಂಗದಲ್ಲಿ ಜೂ.ಬಾಲಯ್ಯ ಎಂದೇ ಖ್ಯಾತರಾಗಿದ್ದ ನಟ ರಘು ಬಾಲಯ್ಯ (70) ಗುರುವಾರ ಮುಂಜಾನೆ (ನ.2 ರಂದು) ನಿಧನರಾಗಿದ್ದಾರೆ.
ಕಳೆದ ಕೆಲ ಸಮಯದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ವಲಸರವಕ್ಕಂನಲ್ಲಿ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ರಘು ಬಾಲಯ್ಯ ಕಾಲಿವುಡ್ ಸಿನಿಮಾರಂದ ಖ್ಯಾತ ನಟನಾಗಿದ್ದ ಟಿಎಸ್ ಬಾಲಯ್ಯ ಅವರ ಪುತ್ರರಾಗಿದ್ದರು. ಅವರನ್ನು ಜೂ. ಬಾಲಯ್ಯ ಎಂದೇ ಕರೆಯುತ್ತಿದ್ದರು.
1975 ರಲ್ಲಿ ಸಿನಿಮಾರಂಗಕ್ಕೆ ಬಂದ ಅವರು, ಅದೇ ವರ್ಷ ಬಂದ ‘ಮೇಲ್ನಾಟ್ಟು ಮರುಮಗಳು’ ಸಿನಿಮಾದ ಮೂಲಕ ಜನಪ್ರಿಯರಾಗಿದ್ದರು.’ಕರಗಟ್ಕಾರನ್’, ‘ಸುಂದರ ಕಾಂಡಂ’, ‘ವಿನ್ನರ್’ ಮತ್ತು ‘ಸತ್ತೈ’ ಮುಂತಾದ ಸಿನಿಮಾಗಳು ಅವರನ್ನು ಹೆಚ್ಚು ಜನಪ್ರಿಯಗೊಳಿಸಿತ್ತು.
ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದರು. ‘ಚಿತಿ’, ‘ವಾಝ್ಕೈ’ ಮತ್ತು ‘ಚಿನ್ನ ಪಾಪ ಪೆರಿಯ ಪಾಪಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. 2019 ರಲ್ಲಿ ಬಂದ ಅಜಿತ್ ಕುಮಾರ್ ಅವರ ‘ನೆರ್ಕೊಂಡ ಪಾರ್ವೈ’ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಹಿಂದಿಯ ʼಪಿಂಕ್ʼ ಸಿನಿಮಾದ ರಿಮೇಕ್ ಸಿನಿಮಾವಾಗಿದೆ. ಅವರು ಕೊನೆಯ ಬಾರಿ 2021 ರಲ್ಲಿ ಬಂದ ʼ ಯೆನ್ನಂಗ ಸರ್ ಉಂಗ ಸತ್ತಂʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.