ಮದ್ದೂರು: ಕೊಪ್ಪ ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆಯ ವಿಷದ ನೀರು ಹರಿದು ಬೆಳೆ ನಷ್ಟ ಸಂಭವಿಸಿದ್ದ ಸಂತ್ರಸ್ತ ರೈತರಿಗೆ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘ ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ತಾಲೂಕು ಕಚೇರಿ ಬಳಿ ತಮಟೆ ಚಳವಳಿ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಬಳಿ ಜಮಾಯಿಸಿದ ಎರಡು ಸಂಘಟನೆಯ ಕಾರ್ಯಕರ್ತರು ಹಾಗೂ ಸಂತ್ರಸ್ತ ರೈತರು ಜಿಲ್ಲಾಡಳಿತ, ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ಸಂತ್ರಸ್ತ ರೈತರಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿದರು.
ತಾಜ್ಯ ನೀರು: ತಾಲೂಕಿನ ಚಿಕ್ಕೋನಹಳ್ಳಿ, ಹಳೇದೊಡ್ಡಿ, ಕೀಳಘಟ್ಟ, ತಗ್ಗಹಳ್ಳಿ ಸೇರಿದಂತೆ ಇನ್ನಿತರೆ ಗ್ರಾಮಗಳ ಜಮೀನುಗಳಿಗೆ ತ್ಯಾಜ್ಯ ನೀರು ಹರಿದು ಬೆಳೆನಷ್ಟ ಸಂಭವಿಸಿರುವ ಜತೆಗೆ ಈ ವ್ಯಾಪ್ತಿಯ ಕೃಷಿ ಭೂಮಿ, ಶಿಂಷಾನದಿ, ಹಳ್ಳಕೊಳ್ಳ, ನಾಲೆಗಳು ಸೇರಿದಂತೆ ಎಲ್ಲಾ ಜಲಮೂಲಗಳು ಮಾಲಿನ್ಯಗೊಂಡಿವೆ. ಇದರಿಂದಾಗಿ ರೈತರು ಬೆಳೆ ಬೆಳೆಯದಂತಹ ಪರಿಸ್ಥಿತಿ ಬಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ ಕೂಡಲೇ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು.
ನಿಯಮ ಪಾಲಿಸಿ: ಉಪ ವಿಭಾಗಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಜತೆಗೆ ಮೀನುಗಾರರಿಗೆ ಉಂಟಾಗಿರುವ ನಷ್ಟ ಭರಿಸುವ ಜತೆಗೆ ಸಂತ್ರಸ್ತ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಮತ್ತು ಡಿಸ್ಟಲರಿ ಘಟಕಗಳನ್ನು ನಿರ್ವಹಿಸಲು ಇರುವ ನಿಯಮಗಳು ಹಾಗೂ ಅನುಮತಿ ಪಡೆಯುವಾಗ ಒಪ್ಪಿರುವ ಕರಾರುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಟಿ.ಯಶವಂತ್, ಕೀಳಘಟ್ಟ ನಂಜುಂಡಯ್ಯ, ಉಮೇಶ್, ಭಾನುಪ್ರಕಾಶ್, ಪ್ರಕಾಶ್, ಶಿವಣ್ಣ, ಕೃಷ್ಣೇಗೌಡ, ರಾಮಣ್ಣ, ಬೊಮ್ಮಯ್ಯ, ಚಿಕ್ಕೋನು, ಬಸವರಾಜು, ರಾಮಯ್ಯ ಮತ್ತಿತರರು ಭಾಗವಹಿಸಿದ್ದರು.