ಬಯಲುಸೀಮೆ ಜಿಲ್ಲೆಗಳಲ್ಲಿ ಹುಣಸೆ ಕೃಷಿ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ರೈತರು, ಹೊಲಗಳ ಬಳಿ ಹುಣಸೆಮರಗಳನ್ನು ಬೆಳೆದಿರುತ್ತಾರೆ. ಮನೆಗಳ ಆವರಣ ದೊಡ್ಡದಾಗಿದ್ದರೆ ಅಲ್ಲಿಯೂ ಒಂದೆರಡು ಮರಗಳಿರುತ್ತವೆ. ಹುಣಸೆ ತೋಪುಗಳ ನಿರ್ವಹಣೆ ಮಾಡುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಇದು ಕಷ್ಟಕಾಲದಲ್ಲಿಯೂ ಆರ್ಥಿಕ ನೆರವಿಗೆ ಬರುವ ಬೆಳೆ ಎಂಬ ಭಾವನೆ ಇದೆ. ಸಾಂಪ್ರದಾಯಿಕ ರೀತಿಯಲ್ಲಿ ಹುಣಸೆಹಣ್ಣಿನ ಸಿಪ್ಪೆ ತೆಗೆಯುವ ಕಾರ್ಯ ಬಹುದೊಡ್ಡ ಪ್ರಕ್ರಿಯೆ. ಮರಗಳ ಸಂಖ್ಯೆ ಹೆಚ್ಚಿದ್ದಷ್ಟೂ ಸಿಪ್ಪೆ ಬಿಡಿಸುವ ಕೈಗಳ ಸಂಖ್ಯೆಯೂ ಹೆಚ್ಚು.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಇದೆ. ಇದರಿಂದ ತ್ವರಿತವಾಗಿ ಸಿಪ್ಪೆ ಬಿಡಿಸಿ, ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಸಕಾಲದಲ್ಲಿ ಮಾರುಕಟ್ಟೆಗೆ ಕಳಿಸುವುದು ಕಷ್ಟವಾಗುತ್ತದೆ. ಈ ವಿಷಯವನ್ನು ಗಮನಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದ ತಜ್ಞರು ಎರಡು ರೀತಿಯ ಹುಣಸೆಹಣ್ಣು ಸಿಪ್ಪೆ ತೆಗೆಯುವ ಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಒಂದು ಕನಿಷ್ಠ ಸಾಮರ್ಥ್ಯದ್ದು, ಇನ್ನೊಂದು ಗರಿಷ್ಠ ಸಾಮರ್ಥ್ಯದ ಯಂತ್ರ. ಮೊದಲನೆಯದರಲ್ಲಿ 2 ಹೆಚ್.ಪಿ. ಸಾಮರ್ಥ್ಯದ ಮೋಟಾರ್ ಅಳವಡಿಸಲಾಗಿದೆ.
ಇದರ ಮುಖಾಂತರ, ಒಂದು ತಾಸಿಗೆ 600 ಕೆ.ಜಿ. ಹುಣಸೆ ಸಿಪ್ಪೆ, 45 ಕೆ.ಜಿ. ಹುಣಸೆಬೀಜಗಳನ್ನು ಪ್ರತ್ಯೇಕಿಸುತ್ತದೆ. ಮೋಟಾರ್ ರಹಿತ ಯಂತ್ರದ ಅಂದಾಜು ಬೆಲೆ 40,000 ರೂ. ಇದನ್ನು ಸಿಂಗಲ್ ಫೇಸ್ ವಿದ್ಯುತ್ ಬಳಸಿಯೂ ಚಾಲನೆ ಮಾಡಬಹುದು. ಎರಡನೆಯ ಯಂತ್ರದ ಮುಖಾಂತರ ಒಂದು ತಾಸಿಗೆ 1,000 ಕೆ.ಜಿ. ಹುಣಸೆ ಸಿಪ್ಪೆ ಬಿಡಿಸುತ್ತದೆ. ಇದರಲ್ಲಿ 5 ಹೆಚ್.ಪಿ. ಮೋಟಾರ್ ಅಳವಡಿಸಲಾಗಿದೆ. ಇದನ್ನು ತ್ರೀ ಫೇಸ್ ವಿದ್ಯುತ್ ಬಳಸಿಯೇ ಚಾಲನೆ ಮಾಡಬೇಕು. ಇದು ಶೇಕಡ 90ರಷ್ಟು ಕಾರ್ಯಕ್ಷಮತೆ ಹೊಂದಿದೆ. ಇದರ ಬೆಲೆ ಒಂದು ಲಕ್ಷ ರೂಪಾಯಿ.
ಹೆಚ್ಚಿನ ಮಾಹಿತಿಗೆ: 080-23545640
* ಕುಮಾರ ರೈತ