Advertisement

ತಾ.ಪಂ. ರದ್ದತಿ ಬೇಡಿಕೆ; ಅಧಿಕಾರ ಹಂಚಿಕೆಗೆ ಆದ್ಯತೆಯಿರಲಿ

12:41 AM Jan 07, 2021 | Team Udayavani |

ರಾಜ್ಯ ಬಿಜೆಪಿ ಶಾಸಕರ ಸಭೆಯಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯ ಮೂರು ಸ್ತರದ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಗ್ರಾಮ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಮಧ್ಯಸ್ತರದಲ್ಲಿರುವ ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ರದ್ದು ಪಡಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಕೆಳ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ರಾಜಕೀಯ ನಾಯತ್ವದ ಬೆಳವಣಿಗೆಗೆ ಪೂರಕವಾಗಿರುವ ಪಂಚಾಯತ್‌ ರಾಜ್‌ ವ್ಯವಸ್ಥೆ ಗ್ರಾಮಗಳ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ.

Advertisement

ಕರ್ನಾಟಕವೇ ದೇಶಕ್ಕೆ ಮಾದರಿಯಾಗಿ ನೀಡಿರುವ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮೂರು ಹಂತದ ಆಡಳಿತ ಇರಬೇಕೆಂದು ಸಂವಿಧಾನ ತಿದ್ದುಪಡಿ ಸಂದರ್ಭದಲ್ಲಿಯೇ ಸಾಕಷ್ಟು ಚರ್ಚೆಗಳಾಗಿವೆ. 1993ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಸಂದರ್ಭದಲ್ಲಿ ಪಂಚಾಯತ್‌ ವ್ಯವಸ್ಥೆಯಲ್ಲಿ ಎಷ್ಟು ಹಂತ ಇರಬೇಕು ಎನ್ನುವ ಕುರಿತು ಚರ್ಚಿಸಿ ತೀರ್ಮಾನಿಸಲು ಸಂಸತ್ತಿನಲ್ಲಿ ಜಂಟಿ ಸದನ ಸಮಿತಿ ರಚಿಸಿ, ಆ ಸಮಿತಿ ವರದಿ ಆಧಾರದಲ್ಲಿ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ ವ್ಯವಸ್ಥೆ ಇರುವಂತೆ ಸಂವಿಧಾನದ 73 ನೇ ತಿದ್ದುಪಡಿ ಮಾಡಲಾಗಿದೆ.

ಅದರಂತೆ ಸಂವಿಧಾನದ ಆರ್ಟಿಕಲ್‌ 243 ಜಿ ಪ್ರಕಾರ 20 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕಡ್ಡಾಯವಾಗಿ ಮೂರು ಹಂತದ ಪಂಚಾಯತ್‌ ಆಡಳಿತ ವ್ಯವಸ್ಥೆ ಇರಬೇಕೆಂದು ಸೂಚಿಸಲಾಗಿದೆ. ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ತೆಗೆದು ಹಾಕುವ ಅಧಿಕಾರ ರಾಜ್ಯ ವಿಧಾನ ಮಂಡಲಕ್ಕೆ ಇದೆ ಎನ್ನುವ ಲೆಕ್ಕಾಚಾರದಲ್ಲಿಯೇ ಬಿಜೆಪಿ ಶಾಸಕರು ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ರದ್ದು ಪಡಿಸಬೇಕೆಂಬ ಪ್ರಸ್ತಾವ‌ ಸರಕಾರದ ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕರ ಆಗ್ರಹದಂತೆ ಸರಕಾರವೂ ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ರದ್ದು ಪಡಿಸುವ ಬಗ್ಗೆ ಆಲೋಚನೆ ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಕಾನೂನು ತಿದ್ದುಪಡಿ ಮಾಡುವ ಆಲೋಚನೆಯನ್ನೂ ಸರಕಾರ ಹೊಂದಿದೆ ಎಂಬ ಮಾತುಗಳು ಆಡಳಿತ ಪಕ್ಷದ ವಲಯದಿಂದಲೇ ಕೇಳಿ ಬರುತ್ತಿವೆ.

ಈಗಿರುವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಸಿಗುತ್ತಿರುವ ಆದ್ಯತೆ ಮತ್ತು ಅನುದಾನ ತಾಲೂಕು ಪಂಚಾಯತ್‌ಗಳಿಗೆ ಸಿಗುತ್ತಿಲ್ಲ ಎಂಬ ಅರೋಪವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಮತ್ತು ಅನುದಾನ ನೇರವಾಗಿ ಗ್ರಾಮ ಪಂಚಾಯತ್‌ಗಳಿಗೆ ತಲುಪುವುದರಿಂದ ಜಿಲ್ಲಾ ಪಂಚಾಯತ್‌ ಅನಂತರ ತಾಲೂಕು ಪಂಚಾಯತ್‌ಗಳಿಗೆ ಯಾವುದೇ ಅಧಿಕಾರ ಹಾಗೂ ಅನುದಾನ ದೊರೆಯದಂತಾಗಿದೆ. ಇದರಿಂದ ತಾಲೂಕು ಪಂಚಾಯತ್‌ ವ್ಯವಸ್ಥೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಳ ಹಂತದಲ್ಲಿ ಆಡಳಿತ ವ್ಯವಸ್ಥೆ ಇರುವ ಬಗ್ಗೆ ಶಾಸಕರ ಆಕ್ಷೇಪವಿದ್ದು, ಎಲ್ಲ ಅಧಿಕಾರವೂ ತಮ್ಮ ಹಿಡಿತದಲ್ಲಿಯೇ ಇರಬೇಕೆಂಬ ಭಾವನೆ ಹೆಚ್ಚಾಗುತ್ತಿದೆ. ಅದರ ಪರಿಣಾಮವಾಗಿಯೇ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯಕ್ಕೆ ಒಳಗಾಗುವಂತಾಗುತ್ತಿದೆ.

ಗ್ರಾಮ ಮಟ್ಟದಿಂದ ದೇಶದ ಅಭಿವೃದ್ಧಿ ಬಯಸುವ, ಜನಪರ ಸರಕಾರ ಆ ರೀತಿಯ ನಕಾರಾತ್ಮಕ ಧೊರಣೆ ಹೊಂದುವ ಬದಲು, ಇರುವ ಮೂರು ಹಂತಗಳ‌ ವ್ಯವಸ್ಥೆಯಲ್ಲಿ ಯಾವ ರೀತಿ ಅಧಿಕಾರ ಮತ್ತು ಅನುದಾನ ಹಂಚಿಕೆ ಮಾಡಿ, ಅಭಿವೃದ್ಧಿಗೆ ಪೂರಕವಾದ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕೆ ಆದ್ಯತೆ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಿದಂತಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next