Advertisement

ತಾಲೂಕು ಪಂಚಾಯತ್‌ ಇರಲಿ; ಅಧಿಕಾರ, ನೇರ ಅನುದಾನ ಕೊಡಲಿ

03:57 PM Jan 20, 2021 | Team Udayavani |

ಹಾಸನ: ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತಂದಿರುವ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಗಳಿಂದ ಎರಡೂವರೆ ವರ್ಷಗಳಿಗೆ
ಇಳಿಸಿದೆ. ಇದೀಗ ಪಂಚಾಯತ್‌ ರಾಜ್‌ ವ್ಯವಸ್ಥೆಯ ಮೂರು ಸ್ತರಗಳನ್ನು ಎರಡಕ್ಕೆ ಇಳಿಸಿ ತಾಪಂ ವ್ಯವಸ್ಥೆಯನ್ನು ರದ್ದುಪಡಿಸುವ ಚಿಂತನೆಯನ್ನೂ ನಡೆಸಿದೆ.

Advertisement

ಕರ್ನಾಟಕದ ಪಂಚಾಯತ್‌ ರಾಜ್‌ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿತ್ತು. ಈ ಹಿನ್ನೆಲೆಯಲ್ಲಿಯೇ ರಾಜೀವ್‌ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ಕರ್ನಾಟಕದ ಮಾದರಿಯ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತಂದರು. ಆದರೆ, ಕರ್ನಾಟಕದಲ್ಲಿ ಒಂದೊಂದು ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು ಗೊಂದಲ ಸೃಷ್ಟಿಸುತ್ತಲೇ ಬಂದಿವೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಎಚ್‌.ಕೆ.ಪಾಟೀಲ್‌ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದಾಗ ಕಾಯ್ದೆಗೆ ತಿದ್ದುಪಡಿ ತಂದು ಪಂಚಾಯತ್‌ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿಯನ್ನು 30 ತಿಂಗಳಿನಿಂದ 60 ತಿಂಗಳಿಗೆ ನಿಗದಿಪಡಿ ಸಿದರೆ, ಈಗ ಯಡಿಯೂರಪ್ಪ ನೇತೃತ್ವದ ಬಿಜೆಪಿ
ಸರ್ಕಾರದಲ್ಲಿ ಆರ್‌ಡಿಪಿಆರ್‌ ಸಚಿವರಾದ ಕೆ.ಎಸ್‌. ಈಶ್ವರಪ್ಪ ಅವರು ಕಾಯ್ದೆಗೆ ತಿದ್ದುಪಡಿ ತಂದು ಪಂಚಾಯತ್‌ ವರಿಷ್ಠರ ಅಧಿಕಾರವಧಿಯನ್ನು 30 ತಿಂಗಳಿಗೆ ನಿಗದಿಪಡಿಸಿದ್ದಾರೆ. ತಾಪಂ ವ್ಯವಸ್ಥೆಯನ್ನು ರದ್ದುಪಡಿಸುವ ಉದ್ದೇಶವಿದೆ ಎಂದೂ ಬಿಜೆಪಿ
ಮುಖಂಡರು ಹೇಳತೊಡಗಿದ್ದಾರೆ.

ಇದನ್ನೂ ಓದಿ:ಇಂದು ಮತ್ತಷ್ಟು  ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್

ತಾಪಂ ವ್ಯವಸ್ಥೆ ಬೇಡವೇ, ಗ್ರಾಮ ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸಾಕೇ ಎಂಬ ಬಗ್ಗೆ ತಾಪಂ ಅಧ್ಯಕ್ಷರು, ಸದಸ್ಯರ
ಅಭಿಪ್ರಾಯ ಸಂಗ್ರಹಿಸಿದಾಗ ಈಗಿರುವ ತಾಪಂ ವ್ಯವಸ್ಥೆಯಿಂದ ಏನೂ ಪ್ರಯೋಜನವಾಗುತ್ತಿಲ್ಲ.

Advertisement

ಆದರೆ, ತಾಪಂಗೆ ಹೆಚ್ಚು ಅನುದಾನ ಮತ್ತು ಅಧಿಕಾರ ಕೊಟ್ಟು ತಾಲೂಕು ಪಂಚಾಯ್ತಿ ಉಳಿಸಿಕೊಳ್ಳುವುದು ಒಳ್ಳೆಯದು. ಗ್ರಾಪಂ, ಜಿಪಂ ನಡುವೆ ಸಂಪರ್ಕ ಸೇತುವಾಗಿ ತಾಪಂ ಇರುವುದು ಒಳ್ಳೆಯದು. ನಾಯಕತ್ವ ರೂಪಿಸುವ ದೃಷ್ಟಿಯಿಂದಲೂ ತಾಪಂ
ಇರಬೇಕು ಎಂಬ ಅಭಿಪ್ರಾಯವ್ಯಕ್ತವಾಗಿದೆ.

ತಾಪಂಗಿಂತ ಗ್ರಾಪಂ ಮೇಲು: ಈಗಿರುವ ತಾಪಂಗೆ ವಾರ್ಷಿಕ 2 ಕೋಟಿ ರೂ. ಅನುದಾನವಷ್ಟೇ ನಿಗದಿಯಾಗಿದೆ. ತಾಲೂಕು ಪಂಚಾಯ್ತಿನಲ್ಲಿ ಕನಿಷ್ಠ 12ರಿಂದ 25 ಮಂದಿ ಸದಸ್ಯರಿರುತ್ತಾರೆ. 2 ಕೋಟಿ ರೂ. ಅನುದಾನದಲ್ಲಿ ಅಷ್ಟು ಮಂದಿ ಸದಸ್ಯರು
ಏನು ಅಭಿವೃದ್ಧಿ ಮಾಡುವುದು ಎಂಬ ಜಿಜ್ಞಾಸೆಯಿದೆ.

ಈಗ ತಾಲೂಕು ಪಂಚಾಯತಿಗಿಂತ ಗ್ರಾಮ ಪಂಚಾಯತಿಗೇ ಹೆಚ್ಚು ಅನುದಾನ ಮತ್ತು ಅಧಿಕಾರವಿದೆ. ಹಾಗಾಗಿ ತಾಪಂ ಹೆಸರಿಗಷ್ಟೇ ಇದೆ ಎಂಬಂತಾಗಿದೆ. ಹಾಗಾಗಿ ತಾಪಂ ಸದಸ್ಯರಾಗುವುದಕ್ಕಿಂತ ಗ್ರಾಪಂ ಸದಸ್ಯರಾಗುವುದೇ ಲೇಸು ಎಂಬ ಚಿಂತನೆ ಕೆಲ ಸದಸ್ಯರಲ್ಲಿದೆ. ಹಾಗಾಗಿ ಕೆಲ ತಾಪಂ ಸದಸ್ಯರು ಗ್ರಾಪಂ ಚುನಾವಣೆ ಸ್ಪರ್ಧಿಸಿ ಗೆದ್ದಿರುವ ಉದಾಹರಣೆಗಳೂ ರಾಜ್ಯದಲ್ಲಿವೆ.
ತಾಪಂ ವ್ಯವಸ್ಥೆ ರದ್ದುಪಡಿಸುವ ಚಿಂತನೆ ಸರ್ಕಾರ ದಿಂದಲೇ ಹೊರ ಬಿದ್ದ ನಂತರ ತಾಪಂ ಅಸ್ಥಿತ್ವ ಇರಬೇಕು ಇಲ್ಲದ್ದಿರೆ ಪಂಚಾಯತ್‌ರಾಜ್‌ ವ್ಯವಸ್ಥೆ ಯಲ್ಲಿಯೇ ಆಮೂಲಾಗ್ರ ಬದಲಾವಣೆಯಾಗ ಬೇಕು ಎಂಬ ಅಭಿಮತ ವ್ಯಕ್ತವಾಗುತ್ತಿದೆ. ಅಂದರೆ,
ಜಿಲ್ಲಾ ಪರಿಷತ್‌ ವ್ಯವಸ್ಥೆ ಇದ್ದಾಗ ಮಂಡಲ ಪಂಚಾಯ್ತಿ ಹೆಚ್ಚು ವಿಸ್ತಾರ ಮತ್ತು ಅಧಿಕಾರ ಹೊಂದಿತ್ತು. ಆಗ ತಾಲೂಕು ಪರಿಷತ್‌ ಸಲಹ ಮಂಡಳಿ ಇತ್ತು. ಆದರೆ, ಗ್ರಾಪಂ ವ್ಯವಸ್ಥೆ ಬಂದಾಗ ಒಂದೊಂದು ಮಂಡಲ ಪಂಚಾಯ್ತಿ ವ್ಯಾಪ್ತಿಯಲ್ಲಿ 2 ರಿಂದ 3 ಗ್ರಾಪಂ ಅಸ್ಥಿತ್ವಕ್ಕೆ ಬಂದವು. ಕೇಂದ್ರ ಸರ್ಕಾರ ನೇರವಾಗಿ ಗ್ರಾಪಂಗೇ ಅನುದಾನ ಬಿಡುಗಡೆ ಮಾಡಲಾರಂಭಿಸಿದಾಗ ತಾಪಂಗಷ್ಟೇ ಅಲ್ಲ. ಜಿಲ್ಲಾ ಪಂಚಾಯ್ತಿಗೂ ಹೆಚ್ಚಿನ ಅನುದಾನ ಸಿಗದಂತಾಗಿದೆ. ಹಾಗಾಗಿ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಿ ಅನುದಾನ ಮತ್ತು ಅಧಿಕಾರ ಹಂಚಿಕೆಯಲ್ಲಿ ಬದಲಾವಣೆಗಳಾಗ ಬೇಕು ಎಂಬ ಚರ್ಚೆ ಆರಂಭವಾಗುತ್ತಿದೆ.

ಜಿಪಂ ವ್ಯಾಪ್ತಿಗೆ ಈಗ 27 ಇಲಾಖೆಗಳು ಬರುತ್ತವೆ. ಆ ಇಲಾಖೆಗಳ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಸ್ಪಷ್ಟ ಅಧಿಕಾರ ಹಂಚಿಕೆಯಾಗಬೇಕು. ಅಂದರೆ, ಇಂತಿಷ್ಟು ಮೊತ್ತದ ಕಾಮಗಾರಿಗಳು ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗೆ ಅನುಷ್ಠಾನದ ಅಧಿಕಾರ ಇರಬೇಕು. ಆ ಕಾಮಗಾರಿಗಳಿಗೆ ನೇರವಾಗಿ ಅನುದಾನ ಸಂಬಂಧಪಟ್ಟ ಪಂಚಾಯ್ತಿ ಸಂಸ್ಥೆಗೇ ಬಿಡುಗಡೆ
ಯಾಗಬೇಕು ಎಂಬ ಸಲಹೆಗಳು ವ್ಯಕ್ತವಾಗಿವೆ. ಆಗ ಮಾತ್ರ ಪ್ರತಿ ಸಂಸ್ಥೆಗೂ ಮಹತ್ವ ಮತ್ತು ಮಾನ್ಯತೆ ಸಿಕ್ಕಿದಂತಾಗುತ್ತದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ. ಹೀಗೆ ಅಧಿಕಾರ ಮತ್ತು ಅನುದಾನ ಹಂಚಿಕೆ ಯಾಗದ ಹೊರತು ಈಗಿರುವ ರೂಪದ ತಾಲೂಕು
ಪಂಚಾಯ್ತಿ ವ್ಯವಸ್ಥೆ ನಿಷ್ಪ್ರಯೋಜಕ ಎಂದೂ ತಾಲೂಕು ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಈಗಿರುವ ಸ್ಥಿತಿಯಲ್ಲಿ ತಾಪಂ ನಿಷ್ಪ್ರಯೋಜಕ
ಈಗಿನ ಸ್ವರೂಪದ ತಾಲೂಕು ಪಂಚಾಯ್ತಿ ನಿಷ್ಪ್ರಯೋಜಕ. ಗ್ರಾಮೀಣ ಮಟ್ಟದಲ್ಲಿ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಲಾಗುತ್ತಿಲ್ಲ. ಆದರೆ, ಗ್ರಾ.ಪಂ. ಮತ್ತು ಜಿ.ಪಂ. ನಡುವೆ ಪ್ರಬಲ ಕೊಂಡಿಯಾಗಿ ತಾಪಂ ಕೆಲಸ ಮಾಡಬೇಕೆಂದರೆ, ಹೆಚ್ಚು ಅಧಿಕಾರ ಮತ್ತು ನೇರ ಅನುದಾನ ಬೇಕು. ಗ್ರಾಪಂನಲ್ಲಿ ತಾಂತ್ರಿಕ ಸಿಬ್ಬಂದಿ ಇರುವುದಿಲ್ಲ. ಎಂಜಿನಿಯರ್‌ಗಳಿದ್ದರೂ ತಾಪಂನಲ್ಲಿ ನಿರ್ದಿಷ್ಟ ಕಾಮಗಾರಿ ಮಂಜೂರು, ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಅನುದಾನವಂತೂ ಇಲ್ಲ. ಈಗ ಕೇವಲ ಸಭೆ ನಡೆಸಿ ಸಲಹೆ ಕೊಡಲಷ್ಟೇ ತಾಪಂ ಕೆಲಸವಾಗಿದೆ. ಹೆಚ್ಚು ಅಧಿಕಾರ ಮತ್ತು ಅನುದಾನ ನೀಡಿ ತಾಪಂ ಬಲಪಡಿಸಿಲಿ.
 ಶ್ಯಾಮಲಾ, ಚನ್ನರಾಯಪಟ್ಟಣ ತಾಪಂ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next