Advertisement

ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ತಾ.ಪಂ. ಆಗ್ರಹ

10:06 PM Jan 13, 2021 | Team Udayavani |

ಕುಂದಾಪುರ: ಕೋವಿಡ್‌ ಲಸಿಕೆಗಳ ವಿಲೇವಾರಿ ಹಾಗೂ ತತ್‌ಸಂಬಂಧಿ ಸಭೆಗಳಿಗೆ ಹಾಜರಾಗುವ ಸಲುವಾಗಿ ಇಲ್ಲಿನ ತಾ.ಪಂ. ಸಾಮಾನ್ಯ ಸಭೆಗೆ ಹಾಜರಾಗದ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕರಣ್‌ ಪೂಜಾರಿ ಒತ್ತಾಯಿಸಿದ್ದಾರೆ.

Advertisement

ಬುಧವಾರ ಇಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತ ನಾ ಡಿದ ಅವರು, ಕಳೆದ ಕೆಲವು ಸಮಯದಿಂದ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಿಂದಾಗುವ ಸಮಸ್ಯೆ ಕುರಿತು ಚರ್ಚಿಸಲಾಗುತ್ತಿದೆ. ಉತ್ತರಿಸಬೇಕೆಂದು ಸೆಕ್ಷನ್‌ 143 ಆಧಾರದಲ್ಲಿ ಡಿಎಚ್‌ಒಗೆ ಹಾಜರಾಗಲು ಪತ್ರ ಬರೆಯಲಾಗಿದ್ದರೂ ಬಂದಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೋವಿಡ್‌ ಲಸಿಕೆ ನಿರ್ವಹಣೆ ತುರ್ತಾಗಿ ಆಗಬೇಕಾದ ಕಾರಣ ಸಭೆಗೆ ಹಾಜರಾಗುತ್ತಿಲ್ಲ ಎಂದು ಅವರು ಲಿಖೀತ ರೂಪದಲ್ಲಿ ನೀಡಿದ ಉತ್ತರಕ್ಕೂ ಸದಸ್ಯರು ಸಮಾಧಾನರಾಗಲಿಲ್ಲ. ಇದಕ್ಕೆ ವಾಸುದೇವ ಪೈ ಹಾಗೂ ಜ್ಯೋತಿ ಪುತ್ರನ್‌ ಅವರು ಬೆಂಬಲ ನೀಡಿದರು.

ಸದಸ್ಯರ ವಿರುದ್ಧ ಶಿಸ್ತು ಕ್ರಮ :

ಗ್ರಾ.ಪಂ.ಗೆ ಆಯ್ಕೆಯಾದ ತಾ.ಪಂ. ಸದಸ್ಯರು ರಾಜೀನಾಮೆ ನೀಡಬೇಕಿದ್ದು ಸಭೆಯಲ್ಲಿ ಭಾಗವಹಿಸುವಂತಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಡಿಸಿಯಿಂದ ಸೂಚನೆ ಬಂದಿದೆ ಎಂದು ತಹಶೀಲ್ದಾರ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಂಕರನಾರಾಯಣ ಗ್ರಾ.ಪಂ.ಗೆ ಆಯ್ಕೆಯಾದ ತಾ.ಪಂ. ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ, ಅಧಿಕಾರ ವಹಿಸಿಕೊಂಡ 15 ದಿನಗಳ ಒಳಗೆ ರಾಜೀನಾಮೆ ನೀಡಬೇಕೆಂದು ಸುತ್ತೋಲೆಯಲ್ಲಿ ಇದೆ. ಆಯ್ಕೆ ಯಾಗಿ 13 ದಿನಗಳಷ್ಟೇ ಆಗಿದ್ದು ಅಧಿಕಾರ ಇನ್ನೂ ವಹಿಸಿಕೊಂಡಿಲ್ಲ. ಹಾಗಿದ್ದರೂ ಇಂದು ರಾಜೀನಾಮೆ ನೀಡಿದ್ದು ಅಂಗೀಕಾರವಾಗಿಲ್ಲ. ಈ ಸಭೆಯಿಂದ ನಿರ್ಗಮಿಸಲು ಸಿದ್ಧನಿದ್ದೇನೆ ಎಂದರು. ಇನ್ನೂ ಅವಧಿ 2 ದಿನಗಳು ಇರುವುದರಿಂದ ಈ ಸಭೆಯಲ್ಲಿ ಭಾಗವಹಿಸಿ ಎಂದು ಅಧ್ಯಕ್ಷೆ ಇಂದಿರಾ ಶೆಡ್ತಿ ಹೇಳಿದರು.

ಹಕ್ಕುಪತ್ರ ಬಾಕಿ :

Advertisement

94ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆಗೆ ಬಾಕಿ ಇದೆ. ಹಟ್ಟಿಯಂಗಡಿ ತಲ್ಲೂರು ಗಡಿಗುರುತು ಮಾಡುವಂತೆ ವರ್ಷದಿಂದ ಮನವಿ ಮಾಡಿದ್ದರೂ ಆಗಿರಲಿಲ್ಲ. ವಸತಿ ನಿವೇಶನಕ್ಕಾಗಿ 125 ಮಂದಿಗೆ ಹಕ್ಕುಪತ್ರ 1997ರಲ್ಲಿ  ನೀಡಿದ್ದು ಅನೇಕರು ಈ ಪೈಕಿ ವಾಸ್ತವ್ಯ ಇಲ್ಲ. ಆದ್ದರಿಂದ ಆ ಸೈಟುಗಳಲ್ಲಿ ಇರುವರಿಗೆ ಹಕ್ಕುಪತ್ರ ನೀಡಬೇಕು ಎಂದು ಕರಣ್‌ ಪೂಜಾರಿ ಹೇಳಿದರು.

ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂಬ ತಹಶೀಲ್ದಾರರ ಮಾತು ಅವರಿಗೆ ಪಥ್ಯ ಎನಿಸಲಿಲ್ಲ. ಈ ಹಿಂದಿನ ತಹಶೀಲ್ದಾರರು ನಿವೇಶನ ಮಂಜೂರಾತಿ ನೀಡಿದ್ದು ಈಗ ಡೀಮ್ಡ್ ಫಾರೆಸ್ಟ್‌ ನೆಪದಲ್ಲಿ ತಗಾದೆ ತೆಗೆದು ನಿರಾಕರಿಸಲಾಗುತ್ತಿದೆ. ಸರ್ವೆ ಮಾಡಿಸಿ ಯಾರಿಗೆಲ್ಲ ಹಕ್ಕುಪತ್ರದ ಆವಶ್ಯಕತೆ ಯಿದೆಯೋ ಅವರ ನಿವೇಶಗಳಿಗೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದರು. ಇಂತಹ ಸಮಸ್ಯೆ ಗುಜ್ಜಾಡಿ ಸೇರಿದಂತೆ ತಾಲೂಕಿನಾದ್ಯಂತ ಇದ್ದು ಮೂಲ ಮಂಜೂರಾತಿದಾರರ ಬದಲು ಬೇರೆಯವರು ಇದ್ದಾರೆ. ಅವರ ಬಳಿ ದಾಖಲೆಗಳಿಲ್ಲ ಎಂದು ನಾರಾಯಣ ಗುಜ್ಜಾಡಿ ಹೇಳಿದರು.

ವಿಂಗಡಿಸಿ ಕೊಡಿ :

ಕೊರ್ಗಿ ಗ್ರಾಮದಲ್ಲಿ 4 ಎಕರೆ ಜಾಗ ಇದ್ದು ಶ್ಮಶಾನ ಹಾಗೂ ಇತರ ಉದ್ದೇಶಗಳಿಗೆ ವಿಂಗಡಿಸಿ ನೀಡಬೇಕು ಎಂದು ಶೈಲಶ್ರೀ ಎಸ್‌. ಶೆಟ್ಟಿ ಹೇಳಿದರು.

ಸುದಿನ’ ವರದಿ ಸದ್ದು :

20 ಲಕ್ಷ ರೂ. ಸಾಲದಲ್ಲಿ ಕೋವಿಡ್‌ ಆಸ್ಪತ್ರೆ ಎಂಬ “ಉದಯವಾಣಿ’ “ಸುದಿನ’ದಲ್ಲಿ ಪ್ರಕಟವಾದ ವರದಿ ಕುರಿತು ಕಳೆದ ಸಭೆಯಲ್ಲಿ ಉಮೇಶ್‌ ಕಲ್ಗದ್ದೆ ಹಾಗೂ ವಾಸುದೇವ ಪೈ ಅವರು ಗಮನ ಸೆಳೆದು ಇಲಾಖೆಯನ್ನು ಪ್ರಶ್ನಿಸಿದ್ದರು. ಅದಕ್ಕೆ ಈ ಬಾರಿ ಉತ್ತರ ನೀಡಿದ ಆರೋಗ್ಯ ಇಲಾಖೆ, ಕೋವಿಡ್‌ ವೆಚ್ಚಗಳಿಗೆ ಸಂಬಂಧಿಸಿದಂತೆ 20.69 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಯವರ ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆಯಾಗಿದೆ. ಅದನ್ನು ಪಾವತಿಸಲಾಗಿದ್ದು ಉಳಿದ ಬಿಲ್ಲುಗಳನ್ನು ಕಳುಹಿಸಲಾಗಿದೆ ಎಂದು ಉತ್ತರಿಸಲಾಗಿದೆ.

ಒತ್ತುವರಿ :

ಗಂಗೊಳ್ಳಿಯಲ್ಲಿ ಚೋಳಕೆರೆ, ಮಡಿವಾಳ ಕೆರೆ ಒತ್ತುವರಿ ತೆರವು ಮಾಡಬೇಕು. ಇಲ್ಲದೇ ಇದ್ದರೆ ತಹಶೀಲ್ದಾರ್‌ ಕಚೇರಿ ಎದುರು ಧರಣಿ ಕೂರುವುದಾಗಿ ಸುರೇಂದ್ರ ಖಾರ್ವಿ ಹೇಳಿದರು. ಐದು ವರ್ಷಗಳಿಂದ ತಾ.ಪಂ. ಸಭೆಯಲ್ಲಿ ಹೇಳುತ್ತಿದ್ದರೂ ನಿರ್ಣಯ ಅನುಷ್ಠಾನವಾಗಿಲ್ಲ ಎಂದರು. ಒತ್ತುವರಿ ತೆರವಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಆನಂದಪ್ಪ ನಾಯ್ಕ ತಿಳಿಸಿದರು.

ಮರಳಿಲ್ಲ  :

ಅಕ್ರಮ ಮರಳು ಹಿಡಿಯಲ್ಲ, ಸಕ್ರಮ ಮರಳು ದೊರೆಯುವುದಿಲ್ಲ ಎಂದು ಜ್ಯೋತಿ ಪುತ್ರನ್‌ ಹೇಳಿದರು. ಕಾಮಗಾರಿಗೆ ಮರಳು ದೊರೆಯುತ್ತಿಲ್ಲ ಎಂದು ಕರಣ್‌ ಪೂಜಾರಿ ಹೇಳಿದರು.

ದೂರು :

ತೋಟಗಾರಿಕೆ ಇಲಾಖೆಗೆ ಸಾರ್ವಜನಿಕರ ಕಾರ್ಯ ನಿಮಿತ್ತ ಹೋದಾಗ ಜಾತಿ ಸಂಘಟನೆಗೆ ದೂರು ನೀಡುವುದಾಗಿ ಅಲ್ಲಿನ ಸಿಬಂದಿ ಬೆದರಿಕೆ ಹಾಕುತ್ತಾರೆ ಎಂದು ಉಮೇಶ್‌ ಶೆಟ್ಟಿ ಕಲ್ಗದ್ದೆ ಹೇಳಿದರು.  ಸರಕಾರಿ ನೌಕರರು, ಅಧಿಕಾರಿಗಳು ಹೀಗೆ ಮಾಡಿದರೆ ಜನಪ್ರತಿನಿಧಿಗಳು, ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಹೋಗುವುದು ಹೇಗೆ ಎಂದರು. ಈ ಕುರಿತು ಜಿಲ್ಲಾ  ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್‌ ಹೇಳಿದರು.

ನಿರ್ಲಕ್ಷ್ಯ :

ಬಿಸಿಎಂ ಹಾಸ್ಟೆಲ್‌ ಅಡುಗೆಯವರಿಗೆ ಸಂಬಳ ನೀಡದ ಕುರಿತು ನೀಡಿದ ದೂರಿಗೆ ಸಾಮಾಜಿಕ ನ್ಯಾಯ ಸಮಿತಿ ಪ್ರತ್ಯೇಕ ಸಮಿತಿ ರಚಿಸಿ ತನಿಖೆಗೆ ನಿರ್ಧರಿಸಿದೆ. ಆದರೆ ಅಧ್ಯಕ್ಷೆ, ಉಪಾಧ್ಯಕ್ಷ ಸೇರಿ ಯಾವೊಬ್ಬ ಜನಪ್ರತಿನಿಧಿಯೂ ಘಟನೆ ಕುರಿತು ಪರಿಶೀಲನೆ ನಡೆಸಿಲ್ಲ. ಪರಿಶಿಷ್ಟರ ಕುರಿತು ದೂರು ನೀಡಿದರೆ ಅಸಡ್ಡೆ, ನಿರ್ಲಕ್ಷ್ಯ ಯಾಕೆ ಎಂದು ನಾರಾಯಣ ಗುಜ್ಜಾಡಿ ಕೇಳಿದರು. ನಿಯೋಗ ಭೇಟಿ ನೀಡಲು ತೀರ್ಮಾನಿಸಲಾಯಿತು.

ಅಧ್ಯಕ್ಷೆ ಇಂದಿರಾ ಶೆಡ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷೆ ರೂಪಾ ಪೈ, ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next