Advertisement

ಗ್ರಾಮಠಾಣಾ ಜಾಗ ಗುರುತಿಸಲು ಒತ್ತಾಯ

07:07 PM Oct 31, 2020 | Suhan S |

ಚಿಕ್ಕಮಗಳೂರು: ಗ್ರಾಮಠಾಣಾ ಜಾಗವನ್ನು 15 ದಿನದೊಳಗೆ ಗುರುತಿಸದಿದ್ದರೆ ಮುಂದಿನ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಡಿ.ಜೆ. ಸುರೇಶ್‌ ಎಚ್ಚರಿಸಿದರು.

Advertisement

ಗುರುವಾರ ನಗರದ ತಾಪಂ ಅಂಬೇಡ್ಕರ್‌ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಶಾರದಾ ಶಶಿಧರರ್‌ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ತಾಪಂ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಾಗಿನಿಂದಲೇ ಈ ಸಮಸ್ಯೆ ಪರಿಹರಿಸುವಂತೆ ಹೇಳಲಾಗುತ್ತಿದೆ. ಆದರೆ ಸಮಸ್ಯೆ ಬಗೆಹರಿದಿಲ್ಲ, ಕೂದುವಳ್ಳಿ, ವಸ್ತಾರೆ, ಬಸ್ಕಲ್‌ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಗ್ರಾಮಠಾಣಾ ಜಾಗವನ್ನು ಕೂಡಲೇ ಗುರುತಿಸಬೇಕು. ಕುಮಾರಗಿರಿಯಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಆದಷ್ಟು ಬೇಗ ಜಾಗ ಗುರುತಿಸುವಂತೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು. ತಾಪಂ ಅಧ್ಯಕ್ಷೆ ಶಾರದಾ ಶಶಿಧರ್‌ ಮಾತನಾಡಿ, ಪರದೇಶಪ್ಪನ ಮಠದವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ನೀಡಬೇಕು. ಹಿಂದಿನ ಜಿಲ್ಲಾಧಿಕಾರಿಗಳು ಕೆಲವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಿದ್ದರೂ ಈಗ ಅಲ್ಲಿ ವಾಸವಾಗಿರುವ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ತಾಪಂ ಸದಸ್ಯ ಸಿದ್ದಾಪುರ ರಮೇಶ್‌ ಮಾತನಾಡಿ, ವಿದ್ಯಾರ್ಥಿ ನಿಲಯಗಳಿಗೆ ಆಹಾರಧಾನ್ಯ ಬಿಡುಗಡೆಗೊಂಡಿದ್ದು, ಸಿರಿವಾಸೆ ಮತ್ತು ಮಲ್ಲಂದೂರು ಸೇರಿದಂತೆ ಇತರೆಡೆ ಸಂಗ್ರಹಿಸಲಾಗಿದೆ. ಆಹಾರಧಾನ್ಯಗಳನ್ನು ಉಪಯೋಗಿಸದೆ ಸ್ವಲ್ಪದಿನ ಹಾಗೇ ಬಿಟ್ಟರೇ ಹಾಳಾಗಲಿದೆ. ಆದ್ದರಿಂದ ಕೂಡಲೇ ಸರ್ಕಾರಕ್ಕೆ ಹಿಂದಿರುಗಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸುಗಡವಾನಿ ಶಾಲೆಗೆ ಸೇರಿದ ಜಾಗ ಒತ್ತುವರಿಯಾಗಿದೆ. ದಾಖಲೆ ಇಲ್ಲದೆ ಮನೆ, ಕಣ, ಶೆಡ್‌ ನಿರ್ಮಿಸಿದ್ದರೆ ವಾರದೊಳಗೆ ಸ್ಥಳಕ್ಕೆ ತೆರಳಿ ದಾಖಲಾತಿ ಪರಿಶೀಲಿಸಿ ತೆರವುಗೊಳಿಸದಿದ್ದರೆ ತಾಲೂಕು ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಸಿದ್ದಾಪುರ ರಮೇಶ್‌ ಎಚ್ಚರಿಸಿದರು.

ಕೆ.ಯು. ಮಹೇಶ್‌ ಮಾತನಾಡಿ, ಕಂಚೇನಹಳ್ಳಿ ಗ್ರಾಮದ ಕ್ಯಾತನಕಟ್ಟೆಗೆ ಹೋಗುವುದಕ್ಕೆ ದಾರಿಯಿಲ್ಲದೆ ದಲಿತರು ಜೀವನ ನಿರ್ವಹಣೆಗೆಂದು ಅರ್ಧ, ಒಂದು ಎಕರೆ ಗದ್ದೆಯನ್ನು ಪಾಳುಬಿಡುವಂತಾಗಿದೆ. ಶಾಸಕರು ದಾರಿ ಬಿಡಿಸಿಕೊಡಲು ಸೂಚಿಸಿದರೂ ಅಧಿಕಾರಿಗಳು ಮಾತು ಕೇಳುತ್ತಿಲ್ಲವೆಂದು ಸಭೆಗೆ ತಿಳಿಸಿದರು.

Advertisement

ಗಿರಿಜನರಿಗೆ ನೀಡುವ ಪೌಷ್ಟಿಕ ಆಹಾರವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಸಭೆಯ ಗಮನ ಸೆಳೆದಾಗ, ಇದಕ್ಕೆ ಉತ್ತರಿಸಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ ರೇವಣ್ಣ, ಈ ಕುರಿತು ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next