Advertisement

ತಾ.ಪಂ ಸಾಮಾನ್ಯ ಸಭೆ: ಇಲಾಖಾವಾರು ಪ್ರಗತಿ ನೋಟ ಮಂಡನೆ

05:45 PM Apr 30, 2022 | Team Udayavani |

ಭಟ್ಕಳ: ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಐ.ಟಿ. ವಿವೇಕ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯು ನಡೆಯಿತು.

Advertisement

ಸಭೆಯಲ್ಲಿ ತಮ್ಮ ತಮ್ಮ ಇಲಾಖೆಯ ಪ್ರಗತಿ ನೋಟವನ್ನು ಇಲಾಖಾವಾರು ಅಧಿಕಾರಿಗಳು ಮಂಡಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಪ್ರಗತಿ ವರದಿಯನ್ನು ಅಧಿಕಾರಿ ಶ್ವೇತಾ ಕರ್ಕಿ ಮಂಡಿಸುತ್ತಾ ವಿವಿಧ ಯೋಜನೆಯಡಿಯಲ್ಲಿ ಬಂದ ಅನುದಾನ ಹಾಗೂ ರೈತರಿಗೆ ಒದಗಿಸಲಾದ ಸಹಾಯ ಧನದ ವಿವರಣೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಅವರು ಮಲ್ಲಿಗೆ ಬೆಳೆಗಾರರ ಹಾಗೂ ಗ್ರಾಹರ ನಡುವಿನ ಮಧ್ಯವರ್ತಿಗಳಿಂದಾಗಿ ಮಲ್ಲಿಗೆ ಬೆಳೆಗಾರರಿಗೆ ದೊರೆಯಬೇಕಾಗಿದ್ದ ದರ ದೊರೆಯದೇ ತೊಂದರೆಯಾಗುತ್ತಿದ್ದು ಈ ಬಗ್ಗೆ ನೇರ ಖರೀದಿಗೆ ಸಹಾಯವಾಗುವಂತೆ ಪ್ರಸ್ತಾವನೆಯನ್ನು ತಯಾರಿಸಲು ಹೇಳಿದ್ದು ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಈ ಕುರಿತು ಮಾಹಿತಿ ಇಲ್ಲದ ಅಧಿಕಾರಿ ಮುಂದಿನ ಸಭೆಗೆ ತಿಳಿಸುವುದಾಗಿ ಹೇಳಿದರು. ನರೇಗಾ ಯೋಜನೆಯ ಪ್ರಗತಿ ತೀರಾ ಕುಂಠಿತವಾಗಿದ್ದು ಹೆಚ್ಚಿಸಲು ಸೂಚಿಸಲಾಯಿತು.

ಕೃಷಿ ಇಲಾಖೆಯಲ್ಲಿ 16 ಸಾವಿರ ಮಾನವ ಕೆಲಸಗಳ ಗುರಿ ನೀಡಲಾಗಿದ್ದರೂ ಸಹ ಅರ್ಧದಷ್ಟು ಸಾಧನೆಯಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪದೇ ಪದೇ ಪ್ರಗತಿಯ ಕುರಿತು ಹೇಳುತ್ತಿದ್ದು ನೋಟೀಸು ನೀಡಿದ್ದಾರೆ. ಮುಂದಿನ ತಿಂಗಳ ಒಳಗಾಗಿ ಪ್ರಗತಿ ಸಾಧಿಸಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೇಳಿದರು.

ಮೀನುಗಾರಿಕಾ ಇಲಾಖೆಯಲ್ಲಿ ಮೀನುಗಾರಿಕಾ ಅಭಿವೃದ್ಧಿಗಾಗಿ ಪ್ರದರ್ಶನ, ತರಬೇತಿಯನ್ನು ನೀಡಲಾಗಿದ್ದು, ಬ್ಯಾಂಕಿಂಗ್ ಕುರಿತು ತರಬೇತಿಯನ್ನು ಸಹ ನೀಡಲಾಗಿದೆ. ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಖರೀದಿಗೆ ಧನ ಸಹಾಯ ನೀಡಲಾಗಿದೆ ಎಂದರು.

Advertisement

2021-22ನೇ ಸಾಲಿನಲ್ಲಿ ಕೋವಿಡ್ ಸಂಬಂಧ ಹಾನಿಯಾದ ಕುರಿತು ಪರಿಹಾರ ಹಣವನ್ನು ನೀಡಲಾಗಿದೆ. ಒಂದು ಮಹಿಳಾ ಉದ್ಯಮಿಯೋರ್ವರ ಕೋಲ್ಡ್ ಸ್ಟೋರೇಜ್ ಮತ್ತು ಐಸ್ ಪ್ಲಾಂಟ್‍ಗೆ 90 ಲಕ್ಷ ಸಬ್ಸಿಡಿ ನೀಡಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾರ್ಥಿ ವೇತನವನ್ನು ಅವರ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. ಅತಿಕ್ರಮಣದಾರರ ಅರ್ಜಿಗಳ ವಿಲೇವಾರಿ ನಡೆಯುತ್ತಿದೆ ಎಂದರು. ಅಂತರ್ಜಾತಿ ವಿವಾಹ ಒಂದು ಅರ್ಜಿ ಬಂದಿದ್ದು ಮಂಜೂರಿಗಾಗಿ ಕಳುಹಿಸಲಾಗಿದೆ ಎಂದರು.

ಅಲ್ಪ ಸಂಖ್ಯಾತರ ಇಲಾಖೆಯ ಶಂಶುದ್ಧೀನ್ ಶೇಖ್ ಮಾತನಾಡಿ, 14 ಜನರಿಗೆ ವಿಶೇಷ ಯೋಜನೆಯಡಿಯಲ್ಲಿ ತಲಾ 25 ಸಾವಿರ ವಿದ್ಯಾರ್ಥಿ ವೇತನ ನೀಡಲಾಗಿದೆ. 116 ಜನ ಪ್ರಯಾಣ ಭತ್ಯೆಗೆ ಅರ್ಜಿ ಸಲ್ಲಿಸಿದ್ದು 83 ಜನರಿಗೆ ತಲಾ 1000ದಂತೆ ನೀಡಲಾಗಿದೆ ಎಂದರು.

ಮೆಟ್ರಿಕ್‍ನಂತರದ ವಸತಿ ನಿಲಯದ ಕಟ್ಟಡ ಪೂರ್ಣಗೊಂಡಿದ್ದು ಉದ್ಘಾಟನೆಗಾಗಿ ಸಚಿವರು ದಿನಾಂಕ ನಿಗದಿ ಮಾಡಬೇಕಾಗಿದೆ. ಜೈನ ಬಸದಿ ಜೀರ್ಣೋದ್ಧಾರಕ್ಕೆ ತಲಾ 10 ಲಕ್ಷದಂತೆ ಎರಡು ಜೈನ ಬಸದಿಗಳಿಗೆ ನೀಡಲಾಗಿದೆ ಎಂದರು.

ಶಿಶು ಅಭಿವೃದ್ಧಿ ಇಲಾಖೆ ಸುಶೀಲಾ ಮಾತನಾಡಿ, ಅಂಗನವಾಡಿಗೆ ಬೇಸಿಗೆ ರಜೆಯಲ್ಲಿ ಮನೆ ಮನೆಗೆ ಪೌಷ್ಟಿಕಾಂಶಯುಕ್ತ ಆಹಾರ ವದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೋಡಿಗದ್ದೆ ಅಂಗನವಾಡಿ ಕೇಂದ್ರದ ಉಸ್ತುವಾರಿ ಬೆಳಕೆ ಪಂಚಾಯತ್‍ನದ್ದಾಗಿದೆ. ಇಲ್ಲಿಗೆ ಬರುವ ಮಕ್ಕಳು ಕೂಡಾ ಯಲ್ವಡಿಕವೂರು ಗ್ರಾಮದವರೇ ಆಗಿದ್ದರಿಂದ ಉಸ್ತುವಾರಿ ತಮಗೆ ವಹಿಸಬೇಕು ಎಂದು ಗ್ರಾಮ ಪಂಚಾಯತ್‍ನಿಂದ ಪತ್ರ ಬರೆದಿದ್ದಾರೆ ಎಂದು ಸಭೆಗೆ ತಿಳಿಸಿದರು. ಈ ಕುರಿತು ವರದಿಯನ್ನು ನೀಡುವಂತೆ ಹಾಗೂ ನಿರ್ಣಯ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಬಸವರಾಜ ಬಳ್ಳಾರಿ ಅವರಿಗೆ ಕುಡಿಯುವ ನೀರಿನ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಸೂಚಿಸಲಾಯಿತು. ಸುಮಾರು 20-25 ಮಜಿರೆಗಳಲ್ಲಿ ಕುಡಿಯುವ ನೀರಿನ ಅಭಾವವಾಗುವ ಸಾಧ್ಯತೆಗಳಿವೆ ಎಂದು ಕಾರ್ಯನಿರ್ವಹಣಾಧಿಕಾರಿ ಸಭೆಗೆ ತಿಳಿಸಿದರು.

ಕಂದಾಯ ಇಲಾಖೆಯ ವಿಜಯಲಕ್ಷ್ಮೀ ಮಣಿ ಇಲಾಖೆಯ ಪ್ರಗತಿ ವರದಿ ನೀಡಿದರು. ಉಳಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ವರದಿಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next