Advertisement

ಅಕ್ಟೋಬರ್‌ ತಿಂಗಳಿನಲ್ಲಿ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ?

08:00 AM Jun 22, 2022 | Team Udayavani |

ಬೆಂಗಳೂರು: ಸೀಮಾ ನಿರ್ಣಯ ಆಯೋಗದ ಸದ್ಯದ ಕಾರ್ಯವೈಖರಿ ಗಮನಿಸಿದರೆ ರಾಜ್ಯದ ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಅಕ್ಟೋಬರ್‌ ವೇಳೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ.

Advertisement

ತಾ.ಪಂ-ಜಿ.ಪಂ ಸದಸ್ಯ ಕ್ಷೇತ್ರಗಳ ಗಡಿಗಳನ್ನು ನಿರ್ಣಯಿಸುವ ಕಾರ್ಯಕ್ಕೆ ನೇಮಿಸಲಾದ ಸೀಮಾ ನಿರ್ಣಯ ಆಯೋಗ ಕಳೆದ ವರ್ಷ ಅಕ್ಟೋಬರ್‌ನಿಂದ ಕಾರ್ಯಾರಂಭ ಮಾಡಿದೆ. ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಹೈಕೋರ್ಟ್‌ 12 ವಾರಗಳ ಗಡುವು ನೀಡಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಮತ್ತಷ್ಟು ವೇಗ ನೀಡಿರುವ ಸೀಮಾ ನಿರ್ಣಯ ಆಯೋಗ, ಕ್ಷೇತ್ರಗಳ ಗಡಿ ನಿರ್ಣಯಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ ಜಿಲ್ಲೆಗಳಿಂದ ಕರಡು ಪ್ರಸ್ತಾವನೆಗಳನ್ನು ತರಿಸಿಕೊಳ್ಳುತ್ತಿದೆ.

ಈಗಾಗಲೇ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ತಾ.ಪಂ. ಜಿ.ಪಂ. ಕ್ಷೇತ್ರಗಳ ಗಡಿ ನಿರ್ಣಯಕ್ಕೆ ಸಂಬಂಧಿಸಿದ ಕರಡು ಪ್ರಸ್ತಾವನೆಗಳು ಸೀಮಾ ನಿರ್ಣಯ ಆಯೋಗಕ್ಕೆ ಜಿಲ್ಲಾಧಿಕಾರಿಗಳಿಂದ ಸಲ್ಲಿಕೆಯಾಗಿದೆ. ಇನ್ನೂ 10 ಜಿಲ್ಲೆಗಳಿಂದ ಕರಡು ಪ್ರಸ್ತಾವನೆ ಬರಲಿಕ್ಕಿದ್ದು, ಈ ತಿಂಗಳಾಂತ್ಯಕ್ಕೆ ಕ್ಷೇತ್ರಗಳ ಗಡಿಗಳ ಕರಡು ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ಕೊಟ್ಟು, ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಲೋಪಗಳಿದ್ದರೆ ಸರಿಪಡಿಸುವ ಕೆಲಸ ನಡೆಯಲಿದೆ. ಇದಕ್ಕಾಗಿ ಸೀಮಾ ನಿರ್ಣಯ ಆಯೋಗ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದೆ. ಅದಾದ ಬಳಿಕ ಕ್ಷೇತ್ರಗಳ ಗಡಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಅದರಂತೆ ಜುಲೈ ಅಂತ್ಯಕ್ಕೆ ತಾ.ಪಂ-ಜಿ.ಪಂ ಕ್ಷೇತ್ರಗಳ ಗಡಿಗಳು ಅಂತಿಮಗೊಳ್ಳಲಿವೆ ಎಂದು ಆಯೋಗದ ಮೂಲಗಳು ಹೇಳಿವೆ.

ಸ್ವತಃ ಸರಕಾರವೇ ಮೀಸಲಾತಿಯನ್ನು ನಿಗದಿಪಡಿಸಬಹುದು ಅಥವಾ ಸೀಮಾ ನಿರ್ಣಯ ಆಯೋಗಕ್ಕೆ ಅದನ್ನು ವಹಿಸಬಹುದು. ಕರಡು ಮೀಸಲಾತಿ ಪ್ರಕಟಿಸಿ ಆಕ್ಷೇಪಣೆಗಳಿಗೆ ಕನಿಷ್ಠ 15 ದಿನ ಕಾಲಾವಕಾಶ ಕೊಟ್ಟು ಆಕ್ಷೇಪಣೆಗಳು ಆಲಿಸಿದ ಬಳಿಕ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಲಿದೆ.

ಚುನಾವಣೆ ನಡೆಸಲು ಕನಿಷ್ಟ 45 ದಿನ ಬೇಕು
ಸೀಮಾ ನಿರ್ಣಯ ಆಯೋಗ ಮತ್ತು ನ್ಯಾ| ಭಕ್ತವತ್ಸಲ ಆಯೋಗದ ಕೆಲಸ ಮುಗಿದ ಬಳಿಕ ರಾಜ್ಯ ಚುನಾವಣಾ ಆಯೋಗ ಕೆಲಸ ಆರಂಭವಾಗಲಿದೆ. ಸೀಮಾ ನಿರ್ಣಯ ಆಯೋಗ ಕ್ಷೇತ್ರಗಳ ಗಡಿಗಳನ್ನು ಅಂತಿಮಗೊಳಿಸಿದರೆ, ಚುನಾವಣ ಆಯೋಗ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸ ಆರಂಭಿಸಲಿದೆ.

Advertisement

ಮೀಸಲಾತಿ ಅಂತಿಮಗೊಳ್ಳುವುದರೊಳಗೆ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸ ಮುಗಿಯಲಿದೆ. ಮೀಸಲಾತಿ ಅಂತಿಮವಾದ ಬಳಿಕ ತಾ.ಪಂ. ಜಿ.ಪಂ.ಗಳಿಗೆ ಚುನಾವಣೆ ನಡೆಸಲು ಕನಿಷ್ಠ 45 ದಿನ ಬೇಕು. ಎಲ್ಲ ಜಿ.ಪಂ.-ತಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿರುವ ಕಾರಣ ಬಹುತೇಕ ಎರಡು ಹಂತಗಳಲ್ಲಿ ಚುನಾವಣೆ ನಡೆಸಬೇಕಾಗಬಹುದು ಎಂದು ರಾಜ್ಯ ಚುನಾವಣ ಆಯೋಗದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಆಯೋಗದ ಅವಧಿ ವಿಸ್ತರಣೆ
ಈ ಮಧ್ಯೆ ಸೀಮಾ ನಿರ್ಣಯ ಆಯೋಗದ ಅವಧಿಯನ್ನು 2022ರ ಎಪ್ರಿಲ್‌ 13ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಿ ಜೂ. 18ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಅವಧಿ ಬಹುತೇಕ ಅಕ್ಟೋಬರ್‌ಗೆ ಅಂತ್ಯಗೊಳ್ಳಲಿದೆ. ಇದನ್ನು ಗಮನಿಸಿದರೆ ತಾ.ಪಂ-ಜಿ.ಪಂಗಳಿಗೆ ಅಕ್ಟೋಬರ್‌ ಅಂತ್ಯದ ವೇಳೆ ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ತಾ.ಪಂ.-ಜಿ.ಪಂ ಕ್ಷೇತ್ರಗಳ ಗಡಿಗಳನ್ನು ನಿರ್ಣಯಿಸುವ ಕಾರ್ಯ ಸಾಗಿದೆ. ಬಹುತೇಕ ಎಲ್ಲಾ ಜಿಲ್ಲೆಗಳಿಂದ ಕ್ಷೇತ್ರಗಳ ಗಡಿಗಳ ಕರಡು ಪ್ರಸ್ತಾವನೆಗಳು ಬಂದಿವೆ. ಇನ್ನೊಂದು 10-15 ದಿನಗಳಲ್ಲಿ ಕರಡು ಹೊರಡಿಸಲಾಗುವುದು.
– ಎಂ. ಲಕ್ಷ್ಮೀನಾರಾಯಣ,
ಅಧ್ಯಕ್ಷರು, ಸೀಮಾ ನಿರ್ಣಯ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next