Advertisement

ತಾಲೂಕು ಆಸ್ಪತ್ರೆ: ಡಯಾಲಿಸಿಸ್‌ ಯಂತ್ರ ಕೊರತೆ; ಡಯಾಲಿಸಿಸ್‌ಗೆ ಕಾಯುತ್ತಿದ್ದಾರೆ 41 ಮಂದಿ

08:00 PM Dec 16, 2021 | Team Udayavani |

ಪುತ್ತೂರು: ಉಪವಿಭಾಗದ ವ್ಯಾಪ್ತಿಯಲ್ಲಿ ಹಿರಿದಾದ ಸರಕಾರಿ ಆಸ್ಪತ್ರೆಯಾಗಿರುವ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಚಿಕ್ಸಿತೆಗೆ ತಕ್ಕಷ್ಟು ಡಯಾಲಿಸಿಸ್‌ ಯಂತ್ರ ಕೊರತೆ ಉಂಟಾಗಿದ್ದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕು ಆಸ್ಪತ್ರೆಯಲ್ಲಿ ಈಗ 5 ಡಯಾಲಿಸಿಸ್‌ ಯಂತ್ರಗಳಿದ್ದು, 51 ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಪೈಕಿ 41 ಮಂದಿ ಕಾಯುವವರ ಪಟ್ಟಿಯಲ್ಲಿದ್ದಾರೆ. ಪಟ್ಟಿ ಬೆಳೆಯದಂತೆ ಹಾಗೂ ಮೂತ್ರಪಿಂಡ ರೋಗಿಗಳಿಗೆ ಸಕಾಲದಲ್ಲಿ ಡಯಾಲಿಸಿಸ್‌ ಸೌಲಭ್ಯ ಸಿಗುವಂತಾಗಲು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ 4 ಡಯಾಲಿಸಿಸ್‌ ಯಂತ್ರ ಅಗತ್ಯ ಇದೆ.

53 ಮಂದಿಗೆ ಚಿಕಿತ್ಸೆ:

4 ವರ್ಷಗಳ ಹಿಂದೆ ಇಲ್ಲಿ ಕೇವಲ 3 ಡಯಾಲಿಸಿಸ್‌ ಯಂತ್ರವಿದ್ದು, ಈ ವೇಳೆ 26 ರೋಗಿಗಳಿಗೆ ಡಯಾಲಿಸಿಸ್‌ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ 26 ಮಂದಿಗೆ ಕನಿಷ್ಠ 3 ಡಯಾಲಿಸಿಸ್‌ ಯಂತ್ರ ಅಗತ್ಯವಿತ್ತು. ಅನಂತರ ಹೆಚ್ಚುವರಿಯಾಗಿ 2 ಡಯಾಲಿಸಿಸ್‌ ಯಂತ್ರ ಅಳವಡಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡಿದ್ದವು.

ಪ್ರಸ್ತುತ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 5 ಡಯಾಲಿಸಿಸ್‌ ಯಂತ್ರದಲ್ಲಿ 45ರಿಂದ 53 ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಿದ್ದು, ರೋಗಿಗಳ ಸಂಖ್ಯೆ ಮಾತ್ರ 92ಕ್ಕೆ ಏರಿಕೆ ಕಂಡಿದ್ದು ಯಂತ್ರಗಳ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.

Advertisement

ಉಪ್ಪಿನಂಗಡಿಯಲ್ಲಿ ಡಯಾಲಿಸಿಸ್‌ ಯಂತ್ರಗಳ ಸ್ಥಾಪನೆ ಅಸಾಧ್ಯ:

ಉಪ್ಪಿನಂಗಡಿಯಲ್ಲಿ ಸಮುದಾಯ ಆಸ್ಪತ್ರೆ ನಿರ್ಮಿಸಿ ಲೋಕಾರ್ಪಣೆ ಗೊಳಿಸಿದ್ದು, ಇಲ್ಲಿ ಒಂದೇ ಒಂದು ಡಯಾಲಿಸಿಸ್‌ ಯಂತ್ರ ಇಲ್ಲ. ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯಂತೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರು ಇಲ್ಲದ ಕಾರಣ ಇಲ್ಲಿ ಸ್ಥಳವಕಾಶವಿದ್ದರೂ ಡಯಾಲಿಸಿಸ್‌ ಯಂತ್ರಗಳ ಸ್ಥಾಪನೆ ಸಾಧ್ಯವಿಲ್ಲ ಎಂಬ ಉತ್ತರ ಲಭಿಸಿದೆ. ಈ ಹಿಂದೆ ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದ ಸಂದರ್ಭ ಉಪ್ಪಿನಂಗಡಿ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಪ್ರತ್ರೇಕ ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ ಸುಮಾರು 2 ಕೋ. ರೂ. ಮೊತ್ತದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದು, ಈ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ.

ಉಪವಿಭಾಗದ ದೊಡ್ಡ ಆಸ್ಪತ್ರೆ :

ಸುಮಾರು 100 ಬೆಡ್‌ ಸಾಮರ್ಥಯದ ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ಗೆ ಏರಿಸುವ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಸುಮಾರು 20 ಕೋ.ರೂ. ವೆಚ್ಚದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಇಡೀ ಆಸ್ಪತ್ರೆಗೆ ಕ್ಯಾಂಪಸ್‌ ರೂಪ ನೀಡುವ ಸಲುವಾಗಿ ಆಸ್ಪತ್ರೆಗೆ ತಾಗಿಕೊಂಡಿರುವ ವಿವಿಧ ಇಲಾಖೆಗಳ ಖಾಲಿ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ 5.5 ಎಕ್ರೆ ಹೊಂದಿರುವ ಜಿಲ್ಲೆಯ ಆಸ್ಪತ್ರೆ ಇದಾಗಲಿದೆ. ಹೀಗಾಗಿ ಆಕ್ಸಿಜನ್‌ ಘಟಕ ಸ್ಥಾಪನೆ ಕೂಡ ಆಸ್ಪತ್ರೆಯ ಬೆಳವಣಿಗೆಗೆ ಪೂರಕವಾಗಲಿದೆ. ಇದೀಗ ಡಯಾಲಿಸಿಸ್‌ ಯಂತ್ರದ ಜೋಡಣೆಯ ಅನಿವಾರ್ಯತೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next