Advertisement
ಇದು ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರು ಪೇಟೆಯಲ್ಲೇ ಮನೆಯಲ್ಲೇ ಒಂದು ಪುಟ್ಟ ಕ್ಯಾಂಟೀನ್ ನಡೆಸುತ್ತಿರುವ ನಾರಾಯಣ ಶೆಟ್ಟಿ ಅವರ ಕುಟುಂಬದ ವ್ಯಥೆ. ಹಲವು ವರ್ಷಗಳಿಂದ ತನ್ನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಮೆಸ್ಕಾಂ ಇಲಾಖೆಗೆ ಅರ್ಜಿ ಹಾಕಿದರೂ, ಮನೆ ಕಟ್ಟಿರುವ ಜಾಗ ಗೋಮಾಳವೆಂದು ಹೇಳಿ ತಲ್ಲೂರು ಗ್ರಾಮ ಪಂಚಾಯತ್ ಸಿಬಂದಿ ನಿರಾಕ್ಷೇಪಣಾ ಪತ್ರ ನೀಡಲು ಹಿಂದೇಟು ಹಾಕಿದೆ. ಪಂಚಾಯತ್ ಅನುಮತಿ ಪತ್ರವಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ಗೋಮಾಳ ಜಾಗವಾದ್ದರಿಂದ ನಾರಾಯಣ ಶೆಟ್ಟಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎಂದು ಜಾರಿಕೊಳ್ಳುವ ಮೆಸ್ಕಾಂ, ಇವರ ಅಕ್ಕ-ಪಕ್ಕದ ಎಲ್ಲ ಅಂಗಡಿ, ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜೀವನೋಪಾಯಕ್ಕೆ ಮನೆಯಲ್ಲೇ ಹಲವು ವರ್ಷಗಳಿಂದ ಒಂದು ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದರೂ, ಅದರಲ್ಲಿ ಏನೂ ಸಿಗುವುದಿಲ್ಲ. ನನಗೆ ಕ್ಯಾಂಟೀನ್ ಬಿಟ್ಟರೆ ಬೇರೇನೂ ಉದ್ಯೋಗ ಗೊತ್ತಿಲ್ಲ ಎನ್ನುತ್ತಾರೆ ನಾರಾಯಣ ಶೆಟ್ಟಿ. ಸೋಲಾರ್ ದೀಪ ಅಳವಡಿಸಿಕೊಳ್ಳ ಬೇಕೆನ್ನುವ ಹಂಬಲವಿದ್ದರೂ ನಾರಾಯಣ ಶೆಟ್ಟಿ ಅವರಿಗೆ ಆರ್ಥಿಕ ಸಂಕಷ್ಟವಿದ್ದು, ಅದು ಸಾಧ್ಯವಿಲ್ಲದಂತಾಗಿದೆ. ತಲ್ಲೂರು ಪಂಚಾಯತ್ ಮತ್ತು ಮೆಸ್ಕಾಂ ಇಲಾಖೆ ಮಾನವೀಯ ನೆಲೆಯಲ್ಲಿ ಈ ಕುಟುಂಬಕ್ಕೆ ವಿದ್ಯುತ್ ದೀಪ ಅಳವಡಿಸಿಕೊಳ್ಳಲು ಅನುಮತಿ ನೀಡಲಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
Related Articles
2015ರಲ್ಲಿ ಕೇಂದ್ರ ಸರಕಾರವು ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೀನ ದಯಾಳ ಉಪಾಧ್ಯಾಯ “ಗ್ರಾಮಜ್ಯೋತಿ’ ಯೋಜನೆ ಜಾರಿಗೆ ತಂದಿದ್ದು, ಇದರಂತೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬ ಕರೆಂಟಿಲ್ಲ ಅಂದರೆ ಅರ್ಜಿ ಸಲ್ಲಿಸಬಹುದು. ಆದರೆ ನಾರಾಯಣ ಶೆಟ್ಟಿ ಅವರು ಬಿಪಿಎಲ್ ಪಡಿತ ಚೀಟಿ ಹೊಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
Advertisement
ಇಬ್ಬರು ಮಕ್ಕಳಿದ್ದು, ಪುತ್ರಿ ಸವಿನಾ ಈಗ ಎಸೆಸೆಲ್ಸಿ ಓದುತ್ತಿದ್ದರೆ, ಪುತ್ರ ಸಚಿನ್ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ರಾತ್ರಿ ಓದಲು ಬರೆಯಲು ಚಿಮಿಣಿ ದೀಪದ ಬೆಳಕೇ ಆಸರೆಯಾಗಿದೆ. ನಾನು ಕೇವಲ 2ನೇ ಕ್ಲಾಸ್‌ವರೆಗೆ ಮಾತ್ರ ಕಲಿತಿದ್ದು, ಜೀವನಕ್ಕೆ ಇದೊಂದು ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದೇನೆ. ಆದರೆ ನನ್ನ ಮಕ್ಕಳು ಉನ್ನತ ವ್ಯಾಸಂಗ ಮಾಡಬೇಕೆಂಬ ಆಸೆಯಿದೆ. ಮೆಸ್ಕಾಂನವರು ಕರೆಂಟ್ ನೀಡಲು ಒಪ್ಪಿದರೆ ಬಹಳಷ್ಟು ಅನುಕೂಲವಾಗಲಿದೆ. ನಾರಾಯಣ ಶೆಟ್ಟಿ, ತಲ್ಲೂರು ಸ್ಥಳೀಯ ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ ನೀಡದಿದ್ದರೆ, ನಮಗೆ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಅಧಿಕಾರವಿಲ್ಲ. ಒಂದು ವೇಳೆ ಆ ಕುಟುಂಬ ಬಿಪಿಎಲ್ ಕಾರ್ಡ್ ಹೊಂದಿದ್ದರೆ ದೀನದಯಾಳ ಯೋಜನೆಯಡಿ ಕರೆಂಟ್ ಕೊಡುವ ಯೋಜನೆಯಿದೆ. ಅದರಂತೆ ಅರ್ಜಿ ಸಲ್ಲಿಸಿದರೆ ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ ಪ್ರಯತ್ನಿಸಲಾಗುವುದು.
ಅಶೋಕ್ ಪೂಜಾರಿ, ಮೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಶಾಂತ್ ಪಾದೆ ನಾರಾಯಣ ಶೆಟ್ಟಿ ಅವರ ಮನೆ ಮತ್ತು ಅವರ ಹೆಸರಲ್ಲಿರುವ ಬಿಪಿಎಲ್ ಪಡಿತರ ಚೀಟಿ.