Advertisement

ತಲ್ಲೂರು ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ

09:05 AM Jun 27, 2019 | sudhir |

ಕುಂದಾಪುರ: ತಲ್ಲೂರಿನಿಂದ ಜಾಲಾಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡದೇ, ಅವೈಜ್ಞಾನಿಕವಾಗಿ ಮಾಡಿರುವ ಕಾರಣ ಈಗ ಹೆದ್ದಾರಿಯೇ ಬಿರುಕು ಬಿಡಲು ಆರಂಭಿಸಿದೆ. ರಸ್ತೆ ಬದಿ ಹಾಕಲಾದ ಮಣ್ಣು ಕೂಡ ಕುಸಿಯುತ್ತಿದೆ.

Advertisement

ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರಿನಿಂದ ರಾಜಾಡಿ ಸೇತುವೆಯವರೆಗಿನ ಮಧ್ಯದ ರಸ್ತೆಯುದ್ದಕ್ಕೂ ಹಲವೆಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಇನ್ನು ಸರಿಯಾಗಿ ಮಳೆಗಾಲವೇ ಆರಂಭವಾಗದಿದ್ದರೂ, ಒಂದೆರಡು ದಿನಗಳ ಮಳೆಗೆ ಈ ಸ್ಥಿತಿಯಾದರೆ, ಇನ್ನು ನಿರಂತರವಾಗಿ ಮಳೆ ಬರುತ್ತಿದ್ದಾಗ ಈ ಹೆದ್ದಾರಿಯ ಸ್ಥಿತಿ ಹೇಗಾಗಬಹುದು ಎನ್ನುವ ಆತಂಕ ಈಗ ಜನರದ್ದಾಗಿದೆ.

ಇಲ್ಲಿನ ಚರಂಡಿ ಸಮಸ್ಯೆಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಮೋರಿ ಅಳವಡಿಸಿದ್ದರೂ, ಅದು ಹಳೆಯದ್ದಾಗಿದೆ. ಅದರಲ್ಲಿ ಸರಾಗ ವಾಗಿ ನೀರು ಹರಿದು ಹೋಗುತ್ತಿಲ್ಲ. ತಲ್ಲೂರಿನಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿ ಯಲ್ಲಿಯೇ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದನ್ನು ಮನಗಂಡು ಅಲ್ಲಿಗೆ ಮೋರಿ ಅಳವಡಿಸಲಾಗಿತ್ತು. ಆದರೆ ಈಗ ಮತ್ತೂಂದು ಸಮಸ್ಯೆ ಎದುರಾಗಿದ್ದು, ಹೆದ್ದಾರಿಯ ಒಂದು ಬದಿಯಿಂದ ಬಿರುಕು ಬಿಡಲು ಆರಂಭಿಸಿದೆ.

ಮಣ್ಣು ಕುಸಿತ

ತಲ್ಲೂರಿನಿಂದ ಜಾಲಾಡಿಯವರೆಗಿನ ಹೆದ್ದಾರಿ ಬದಿ ಹಾಕಲಾದ ಮಣ್ಣೆಲ್ಲ ಕುಸಿದು ಗದ್ದೆಗಳು, ಇಲ್ಲೇ ಸಮೀಪದ ಚಟ್ಲಿ ಕೆರೆಗಳಿಗೆ ಬಿದ್ದಿದೆ. ಮಳೆ ಮತ್ತಷ್ಟು ಹೆಚ್ಚಾದಷ್ಟು ಈ ಮಣ್ಣಿನ ಕುಸಿತ ಮತ್ತೆ ಹೆಚ್ಚಾಗುವ ಭೀತಿ ಇದೆ.

ಎಂಪಿ ಗಮನಕ್ಕೆ ತರುವೆ
ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ತಲ್ಲೂರು, ಉಪ್ಪುಂದ ಹೀಗೆ ಅನೇಕ ಕಡೆಗಳಲ್ಲಿನ ಅವ್ಯವಸ್ಥೆ ಬಗ್ಗೆ ನಾನು ಈ ಹಿಂದೆಯೂ ಐಆರ್‌ಬಿ ಅಧಿಕಾರಿಗಳಿಗೆ, ಹೆದ್ದಾರಿ ಪ್ರಾಧಿಕಾರದ ಗಮನಸೆಳೆದಿದ್ದೇನೆ. ಉಪ್ಪುಂದದಲ್ಲಿ ಐಆರ್‌ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಅಲ್ಲಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಇನ್ನು ಜೂ.25 ರಂದು ಸಂಸದ ಬಿ.ವೈ. ರಾಘವೇಂದ್ರ ಅವರು ಬೈಂದೂರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಈ ವಿಚಾರವನ್ನು ಅವರ ಗಮನಕ್ಕೆ ತಂದು, ಕೇಂದ್ರ ಸಚಿವರಿಗೂ ತಿಳಿಸುವ ಪ್ರಯತ್ನ ಮಾಡಲಾಗುವುದು.
Advertisement

– ಬಿ.ಎಂ. ಸುಕುಮಾರ್‌ ಶೆಟ್ಟಿ,ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next