Advertisement
ತಲ್ಲೂರು – ಉಪ್ಪಿನಕುದ್ರು ರಸ್ತೆಯ ತಲ್ಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕಿಂತ ಸ್ವಲ್ಪ ದೂರದಲ್ಲಿಯೇ ಈ ಪುರಾತನ ಕೆರೆಯಿದ್ದು, ಹಿಂದೆ ನಿರ್ಮಿಸಿದ್ದ ದಂಡೆ ಮುರಿದು ಬಿದ್ದಿತ್ತು. ಹತ್ತಿರದಲ್ಲೇ ಅಂಗನವಾಡಿ ಕೇಂದ್ರವೂ ಇದ್ದುದರಿಂದ ಅಪಾಯಕಾರಿಯಾಗಿದ್ದು, ಈಗ ಪಂಚಾಯತ್‌ನಿಂದ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.
ಇದು 60 ವರ್ಷಗಳಿಗೂ ಹಿಂದಿನ ಕೆರೆಯಾಗಿದ್ದು, ವಿಶಾಲವಾದ ಪ್ರದೇಶದಲ್ಲಿದೆ. ಈ ಕೆರೆಯ ಹೂಳೆತ್ತದೇ 30 ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಇನ್ನು 10 ವರ್ಷದ ಹಿಂದೆ ಒಮ್ಮೆ ರಸ್ತೆ ಬದಿಗೆ ದಂಡೆ ನಿರ್ಮಿಸಲಾಗಿತ್ತು. ಅದು ಸಹ ಈಗ ತುಂಡಾಗಿ ಹೋಗಿದೆ. ಈಗ ತಡೆಗೋಡೆ ಆಗುತ್ತಿದೆ. ಅದರೊಂದಿಗೆ ಹೂಳೆತ್ತಿ, ಪುನರುಜ್ಜೀವನಗೊಳಿಸಿದರೆ, ಇಲ್ಲಿನ ಪರಿಸರದ ಸುಮಾರು 25ಕ್ಕೂ ಮಿಕ್ಕಿ ಮನೆಗಳಲ್ಲಿರುವ ಬಾವಿಯ ಅಂತರ್ಜಲ ಮಟ್ಟ ವೃದ್ಧಿಗೂ ಸಹಕಾರಿಯಾಗಬಹುದು. ಇದಲ್ಲದೆ ಇಲ್ಲಿನ ಹತ್ತಾರು ಎಕರೆ ಗದ್ದೆಗಳಲ್ಲಿ ಎರಡನೇ ಬೆಳೆ ಬೆಳೆಯಲು ಸಹ ಪೂರಕವಾಗಲಿದೆ. ಕೆರೆಯ ಹೂಳೆತ್ತಿ, ಕುಸಿಯದಂತೆ ಕಲ್ಲುಗಳನ್ನು ಕಟ್ಟಿ, ತಡೆಗೋಡೆ ನಿರ್ಮಿಸಿದರೆ ಈ ಪರಿಸರದ ಉತ್ತಮ ನೀರಿನ ಮೂಲ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಭಿವೃದ್ಧಿಗೆ ಪ್ರಸ್ತಾವ
ಹಂಗಾರ್‌ಕೆರೆ ರಸ್ತೆ ಬದಿಯೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತಾಗಿ ಪಂಚಾಯತ್ ವತಿಯಿಂದ ತುರ್ತಾಗಿ ತಡೆಗೋಡೆ ನಿರ್ಮಿಸುತ್ತಿದ್ದೇವೆ. ಇನ್ನು ಲೋಕೋಪಯೋಗಿ ಇಲಾಖೆಗೂ ಪಂಚಾಯತ್‌ನಿಂದ ಪತ್ರ ಬರೆದಿದ್ದೇವೆ. ಇನ್ನು ಕೆರೆಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಶಾಸಕರಿಗೂ ಪ್ರಸ್ತಾವನೆ ಸಲ್ಲಿಸಿದ್ದೇವೆ.
– ಗಿರೀಶ್ ನಾಯ್ಕ, ಅಧ್ಯಕ್ಷರು, ತಲ್ಲೂರು ಗ್ರಾ.ಪಂ.