ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಹಾಡಹಗಲೇ ಒಳನುಗ್ಗಿ ಅಲ್ಲಿದ್ದ ಒಟ್ಟು 85 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನಗೈದಿರುವ ಘಟನೆ ತಲ್ಲೂರು ಗ್ರಾಮದ ಪಾರ್ತಿಕಟ್ಟೆಯಲ್ಲಿ ಫೆ. 13ರಂದು ನಡೆದಿದೆ.
ಪಾರ್ತಿಕಟ್ಟೆಯಲ್ಲಿ ಶ್ರೀನಿಧಿ ಮೊಗವೀರ ಅವರು ವೈಲೇಟ್ ಸಿಕ್ವೇರಾ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಫೆ. 13ರ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ತೆರಳಿದ್ದಳು. ಸಂಜೆ 6 ಗಂಟೆಗೆ ವಾಪಸು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಬಚ್ಚಲು ಮನೆಯ ಗೋಡೆ ಹತ್ತಿ ಒಳ ಬಂದು ಅಡುಗೆ ಮನೆಗೆ ಬರುವ ಬಾಗಿಲಿನ ಚಿಲಕ ಮುರಿದು, ಒಳಗಿನ ಕಪಾಟಿನಲ್ಲಿದ್ದ 70 ಸಾವಿರ ರೂ. ಮೌಲ್ಯದ 8 ಗ್ರಾಂನ 2 ಚಿನ್ನದ ಕಾಯಿನ್‌ಗಳು, 3 ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ 15 ಸಾವಿರ ರೂ. ಸೇರಿ ಒಟ್ಟು 85 ಸಾವಿರ ರೂ. ಮೌಲ್ಯದ ಹಣ ಹಾಗೂ ಚಿನ್ನ ಕಳವು ಮಾಡಲಾಗಿದೆ. ಕುಂದಾಪುರ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು, ಶ್ವಾನದಳವನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಇದಲ್ಲದೆ ಸುತ್ತಮುತ್ತಲಿನ ಸಿಸಿ ಟಿವಿ ಕೆಮರಾಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಶ್ರೀನಿಧಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಗಲು ವೇಳೆ ಕಳ್ಳತನ: ಆತಂಕ
ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನ ನಡೆಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದ್ದು, ಆದರೆ ಈಗ ಹಗಲು ವೇಳೆಯೂ ಈ ರೀತಿಯ ಕಳ್ಳತನ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ರೀತಿಯಾಗಿ ನಿರ್ಜನ ಪ್ರದೇಶದಲ್ಲಿರುವ ಮನೆಗಳನ್ನು ಗುರುತಿಸಿ ಅದರಲ್ಲೂ ಪ್ರಮುಖವಾಗಿ ಯಾರೂ ಇಲ್ಲದ ಮನೆಗಳನ್ನೇ ಗುರಿಯಾಗಿಸಿಕೊಂಡು, ಕಳ್ಳತನ ನಡೆಸುವ ತಂಡವೇನಾದರೂ ಸಕ್ರಿಯವಾಗಿದೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.