ನೃತ್ಯದಲ್ಲಿ ಚತುರ ಶಿಲ್ಪಿಯ ರೂಪ ಲಾವಣ್ಯವನ್ನು ನೋಡಬಹುದು. ಚಿತ್ರಕಾರನ ರೇಖಾ ವಿನ್ಯಾಸಗಳನ್ನು ಕಾಣಬಹುದು. ಕವಿ ಕಲ್ಪನೆಯ ವಿಲಾಸಕ್ಕೆ ಮಾರು ಹೋಗಬಹುದು. ನಟನ ಜೀವನಾನುಭವವನ್ನು ನಿರೂಪಿಸಬಹುದು’. ನೂರು ಮಾತುಗಳು ಹೇಳದ್ದನ್ನು ಒಂದು ನೋಟ ಹೇಳುತ್ತದೆ. ಒಂದು ಮುದ್ರೆ ತೋರುತ್ತದೆ. ಅಂಗವಿನ್ಯಾಸ ಶ್ರುತಗೊಳಿಸುತ್ತದೆ.
ಯಕ್ಷಗಾನದ ಆಡುಂಬೊಲವಾದ ಕರಾವಳಿಯಲ್ಲಿಂದು ನೃತ್ಯವೂ ಜನಪ್ರಿಯವಾಗಿ ಕಲಾರಸಿಕರ ಹೃನ್ಮನವನ್ನು ತಣಿಸುತ್ತಿದೆ. “ಪ್ರಾಯೇಣ ಸರ್ವಲೋಕಸ್ಯ ನೃತ್ಯಮಿಷ್ಟಂ ಸ್ವಭಾವತಃ ಪ್ರಾಯಃ’. ನೃತ್ಯವು ಸ್ವಭಾವತಃ ಎಲ್ಲರಿಗೂ ಇಷ್ಟವಾದುದೆಂದು ನಾಟ್ಯ ಶಾಸ್ತ್ರ ಹೇಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
“ನೃತ್ಯದಲ್ಲಿ ಚತುರ ಶಿಲ್ಪಿಯ ರೂಪ ಲಾವಣ್ಯವನ್ನು ನೋಡಬಹುದು. ಚಿತ್ರಕಾರನ ರೇಖಾ ವಿನ್ಯಾಸಗಳನ್ನು ಕಾಣಬಹುದು. ಕವಿಕಲ್ಪನೆಯ ವಿಲಾಸಕ್ಕೆ ಮಾರು ಹೋಗಬಹುದು. ನಟನ ಜೀವನಾನುಭವವನ್ನು ನಿರೂಪಿಸಬಹುದು’. ಇಲ್ಲಿ ನೂರು ಮಾತುಗಳು ಹೇಳದ್ದನ್ನು ಒಂದು ನೋಟ ಹೇಳುತ್ತದೆ. ಒಂದು ಮುದ್ರೆ ತೋರುತ್ತದೆ. ಅಂಗವಿನ್ಯಾಸ ಶ್ರುತಗೊಳಿಸುತ್ತದೆ. ಹೀಗಾಗಿ ನೃತ್ಯ ರಸಾಸ್ವಾದನೆಗೆ ಭಾಷೆ ತೊಡಕಾಗವುದಿಲ್ಲ. ಕವಿ ಕುಲಗುರು ಕಾಳಿದಾಸ “ನಾಟ್ಯಂ ಭಿನ್ನರುಚೇರ್ಜನಶ್ಯ ಬಹುಧಾಪೆಕಂ ಸಮಾರಾಧನಮ್’. ನಾಟ್ಯವೂ ಭಿನ್ನರುಚಿಯ ಎಲ್ಲರಿಗೂ ಸಮಾರಾಧನವೇ ಸರಿ ಎಂದಿದ್ದಾನೆ.
ನಟನೋ, ನಟನಿಗೋ ಅಭಿಜಾತ ದೇಹ ಸೌಂದರ್ಯವಿದ್ದಲ್ಲಿ, ಶಿಲ್ಪ ಸಾದೃಶವಾದ ಅಂಗಾಂಗಳಿದ್ದಲ್ಲಿ, ಭಾವವ್ಯಂಜಕವಾದ ನಯನಗಳಿದ್ದಲ್ಲಿ, ದೇಹ ಪ್ರಮಾಣ ಸಮ ಪ್ರಮಾಣವಿದ್ದಲ್ಲಿ ನೃತ್ಯವು ಮಾಡುವ ಪರಿಣಾಮವೇ ಬೇರೆ. ಇದರೊಂದಿಗೆ ಸಂಗೀತ, ಸಾಹಿತ್ಯ ಶಕ್ತಿಗಳ ಪರಿಜ್ಞಾನ, ಸ್ವಯಂ ಕಲ್ಪನೆ-ಸ್ಪಷ್ಟಿಶೀಲ ಗುಣವಿದ್ದಲ್ಲಿ ನೃತ್ಯ ಉಂಟುಮಾಡುವ ಪರಿಣಾಮ ಅನನ್ಯವೆನಿಸುತ್ತದೆ; ಬಹುಶ್ರುತವಾಗುತ್ತದೆ ಎಂಬುದಕ್ಕೆ ಶರನ್ನವರಾತ್ರಿಯ ಕಾಲದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಸಂಪನ್ನಗೊಂಡ ನೃತ್ಯವಿದುಷಿ ಡಾ| ರಶ್ಮಿ ಗುರುಮೂರ್ತಿಯವರ ನೃತ್ಯ ಸಾಕ್ಷಿಯಾಗಿತ್ತು. ಸಾಂಪ್ರದಾಯಿಕ ಪುಷ್ಪಾಂಜಲಿ (ರಾಗ ಮಾಲಿಕೆ, ತಾಳಮಾಲಿಕೆೆ)ಯೊಂದಿಗೆ ಪ್ರತಿಭೆಯನ್ನು ತೋರಿದರು. ಕಾಲೈತೂಕಿ (ನಟರಾಜನ ಕಾಲ್ಗೆಜ್ಜೆಗಳು ನಲಿಯುತ್ತಿವೆ) ತಮಿಳು ಸಾಹಿತ್ಯದ, ಭಾಗೇಶ್ರೀ ರಾಗ, ರೂಪಕ ತಾಳದಲ್ಲಿ ಮನೋಜ್ಞವಾಗಿ ಮೂಡಿ ಬಂತು. ವಿಶೇಷವೆಂದರೆ ಇಲ್ಲಿ ನಟರಾಜನೆ ಕಾಲ್ಗೆಜ್ಜೆಗಳು ಕುಣಿಯುವುದು, ಇದನ್ನು ತೋರುವಲ್ಲಿನ ನಟಿಯ ಸೂಕ್ಷ್ಮಾವಲೋಕನ ಗತಿಪ್ರಜ್ಞೆ ಮೆಚ್ಚುವಂತಿತ್ತು. ದೇವೀ ಅಕ್ಷರಂ (ರಾಗಮಾಲಿಕೆ, ತಾಳಮಾಲಿಕೆ) ಡಾ| ರಶ್ಮಿ ಗುರುಮೂರ್ತಿಯವರ ವಿಶಿಷ್ಟ ಸಂಯೋಜನೆ. ಶ್ರೀ ದುರ್ಗಾ ಸಪ್ತಶತಿಯಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ “ನವರಾಕ್ಷಸರು’ ಮಧು-ಕೈಟಭಾದಿ ರಕ್ತಬೀಜಾಸುರರ ವಧೆಯವರೆಗಿನ ಮುಖ್ಯಾಂಶಗಳನ್ನು ತೋರುವಲ್ಲಿ ಕಲಾವಿದೆ ಗಮನಸೆಳೆದರು. ನಾನೇನು ಮಾಡಿದೆನೋ (ರಾಗಮಾಲಿಕೆ, ಆದಿತಾಳ) ಪುರಂದರದಾಸರ ಪ್ರಸಿದ್ಧವಾದ ಕೃತಿ-ಸ್ವಯಂ ಕೃಷ್ಣಭಕ್ತೆಯಾಗಿ, ಕೃಷ್ಣನ ಕುರಿತು ಅನೇಕ ಭಾವಗೀತೆಗಳನ್ನು ಬರೆದ ಕವಯತ್ರಿ-ನರ್ತಕಿ ಹೃನ್ಮನ ತಣಿಯುವ ಅಭಿನಯ ತೋರಿದರು. ಸಂಚಾರೀ ಭಾವದಲ್ಲಿ ಕೃಷ್ಣ-ಕುಚೇಲರ ಸ್ನೇಹ ಸಾಹಿತ್ಯ ಪರಿಣಾಮಕಾರಿಯಾಗಿತ್ತು. ಡಾ|ರಶ್ಮಿ ಆಸಕ್ತಿಯಿಂದ ಗುರುಮುಖೇನ ಕೂಚಿಪುಡಿ ಕಲಿತವರು. ಹೀಗಾಗಿ, ಅನ್ನಮಾಚಾರ್ಯರ ಕೃತಿ ಮುದ್ದುಗಾರೆ ಯಶೋಧಾ (ಕುರಂಜಿ-ಆದಿತಾಳ)ವನ್ನು ಕಲಾಸಕ್ತರಿಗೆ ತೋರಿ ಕೊಡುವಲ್ಲಿ ಪೂರ್ಣ ಯಶಸ್ವಿಯಾದರು.
ನೃತ್ಯದ ಹಿಮ್ಮೇಳ ಸಾಥಿಗಳಾಗಿ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ಗುರು ಉಡುಪಿ ವೀಣಾ ಮುರುಳೀಧರ ಸಾಮಗ , ಸಂಗೀತ ಮತ್ತು ನಟುವಾಂಗದಲ್ಲಿ ತನ್ನ ಶಿಷ್ಯೆಯ ಪ್ರತಿಭಾ ದರ್ಶನಕ್ಕೆ ಬೆಂಬಲವಾಗಿ ಸೈಯೆನಿಸಿಕೊಂಡರು. ವಿ| ರಾಮಚಂದ್ರ ಪಾಂಗಣ್ಣಾಯ ಮೃದಂಗವಾದನ ನೃತ್ಯಕ್ಕೆ ಪೋಷಕವೂ ಆಗಿತ್ತು. ವಯೋಲಿನ್ ವಾದಕರಾಗಿ ಮಾ| ವೈಭವ್ ಪೈ, ಮಣಿಪಾಲ ಅವರು ಸಾಂಗತ್ಯ ನೀಡಿದರು.
ಅಂಬಾತನಯ ಮುದ್ರಾಡಿ