Advertisement

ಟಾಲ್ ಬಾಯ್, ಶಾರ್ಟ್ ಗರ್ಲ್ ಪರ್ಫೆಕ್ಟ್ ಪೇರ್.. ಕಾಲೇಜು ಕ್ರಶ್ ಎಂಬ ಮಧುರ ಭಾವನೆ

06:09 PM Feb 13, 2020 | keerthan |

ಡಿಗ್ರಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೊಸ ಕಾಲೇಜಿಗೆ ಸೇರಿಕೊಂಡೆ. ಹೊಸ ಜಾಗ, ಹೊಸ ಜನ, ಹೊಸ ವಾತಾವರಣ ಹೇಗೆ ಇವೆಲ್ಲದರ ಜೊತೆ ಎಡ್ಜಸ್ಟ್ ಆಗೋದು ಎಂದು ಅಂದುಕೊಂಡು ಹೋಗಿದ್ದೆ, ಆದರೆ ಹೋಗ್ತಾ ಹೋಗ್ತಾ ಎಲ್ಲವೂ ತನ್ನಿಂದ ತಾನೆ ಹೊಂದಿಕೊಂಡು ಹೋಯ್ತು. ಯಾವ ತರದ ಫ್ರೆಂಡ್ಸ್ ಸಿಗುತ್ತಾರಪ್ಪಾ ಎಂದು ಗೊಂದಲದಲ್ಲಿದ್ದ ನನಗೆ ತುಂಬಾ ಒಳ್ಳೆ ಫ್ರೆಂಡ್ಸೇ ಸಿಕ್ಕಿದ್ರು. ಇದೇ ಖುಷಿಯಲ್ಲಿ ಪ್ರತೀ ದಿನ ಕಾಲೇಜು ಹೋಗಿ ಹೋಗಿ ಬರುತ್ತಿದ್ದೆ.

Advertisement

ಕಾಲೇಜು ಅಂದ ಮೇಲೆ ಫ್ರೆಂಡ್ಶಿಪ್, ಕ್ರಷ್, ಲವ್ವು ಇದೆಲ್ಲಾ ಕಾಮನ್. ಒಂದು ಗೆಳೆಯರ ಬಳಗ ಸ್ಟೈಲಾಗಿ ಗ್ಯಾಂಗ್ ಎಂದೂ ಕೂಡ ಹೇಳುತ್ತಾರೆ. ಗೆಳೆಯರಿಗೆ ಯಾರ್ ಯಾರದ್ದೋ ಹೆಸರು ಹೇಳಿಕೊಂಡು ಗೇಲಿ ಮಾಡುವುದು, ಜೊತೆಗೆ ಏನೇನೋ ನಿಕ್ ನೇಮ್ ಗಳಿಡುವುದು, ತಮಾಷೆ ಮಾಡುವುದು. ಕಾಲೇಜ್ ಲೈಫ್ ಅಂದ ಮೇಲೆ ಇದೆಲ್ಲಾ ಇದ್ದದ್ದೆ ಅಲ್ವಾ! ಇದೇ ತರ ನನ್ನದೂ ಒಂದು ಗ್ಯಾಂಗ್ ಆ ಗ್ಯಾಂಗಲ್ಲಿ ಒಂದಿಷ್ಟು ಜನ, ನಮ್ಮದೇ ಸೀಕ್ರೇಟ್‌ಗಳು. ಒಬ್ಬಳಿಗೆ ದಾಡಿ ಹುಡುಗ ಇನ್ನೊಬ್ಬಳಿಗೆ ಪೂಜೆ ಭಟ್ಟ ಅಂದೆಲ್ಲಾ ತಮಾಷೆ ಮಾಡುತ್ತಾ ಇದ್ದೆವು. ಹೀಗೇ ದಿನ ಮುಂದೆ ಹೋಗುತ್ತಾ ಇತ್ತು.

ಅದೇ ಸಮಯದಲ್ಲಿ ನಾನೂ ಕಾಲೇಜಿನಲ್ಲಿ ಒಬ್ಬ ಹುಡುಗನನ್ನು ನೋಡಿದೆ, ನೋಡುವುದಕ್ಕೆ ಡೀಸೆಂಟು, ಸ್ವಲ್ಪ ಕ್ಯೂಟು ಇದ್ದ. ಅವನನ್ನು ನೋಡಿದ ನಂತರದ ದಿನಗಳಲ್ಲಿ ನನ್ನ ಕಣ್ಣುಗಳು ಎಲ್ಲೆಲ್ಲೂ ಅವನನ್ನೇ ಹುಡುಕುತ್ತಿತ್ತು. ಎಲ್ಲೋ ನನಗೂ ಕ್ರಷ್ ಆಗಿಬಿಟ್ಟಿದೆ ಎಂದು ಅನಿಸಿತು. ಈ ಕ್ರಷ್ ಆಗಿರೋ ವಿಚಾರವನ್ನು ಫ್ರೆಂಡ್ಸ್ ಜೊತೆ ಹೇಳಿಕೊಂಡರೆ ಅವರು ಕೊಡೋ ಕಾಟವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ, ಹಾಗೆಂದು ಅವರಿಂದ ಮುಚ್ಚಿಡೋಕು ಆಗುವುದಿಲ್ಲ ಅಂದುಕೊಂಡು ಕೊನೆಗೆ ನನಗೂ ನಿಮ್ಮ ಹಾಗೇ ಒಂದು ಕ್ರಷ್ ಆಗಿದೆ ಎಂದು ನನ್ನ ಗ್ಯಾಂಗ್ ಜೊತೆ ಹೇಳಿಯೇ ಬಿಟ್ಟೆ. ಆಮೇಲೆ ಕೇಳ್ಬೇಕಾ ಇಷ್ಟು ದಿನ ನಾನು ಅವರಿಗೆ ಕೊಟ್ಟ ಕಾಟಗಳಿಗೆಲ್ಲಾ ಬಡ್ಡಿ ಸೇರಿಸಿ ನನ್ನನ್ನು ಗೇಲಿ ಮಾಡಲು ತೊಡಗಿದರು.

ಇಂಥಾ ಸಮಯದಲ್ಲಿ ಆ ಹುಡುಗನ ಕ್ಲಾಸ್‌ನವರೆಲ್ಲಾ ನಮ್ಮ ಕ್ಲಾಸ್‌ಗೆ ಬರುತ್ತಾರೆ. ಆ ಹುಡುಗನೂ ಆ ಗುಂಪಿನಲ್ಲಿರುತ್ತಾನೆ. ನಾನಂತೂ ಫುಲ್ ಖುಷ್, ಅಷ್ಟರಲ್ಲೇ ನನ್ನ ಫ್ರೆಂಡ್ಸ್ ನಗಲು ಶುರು ಮಾಡಿದ್ದರು. ಅವನು ಬಂದವನು ನನ್ನನ್ನು ನೋಡಿ ನಗುತ್ತಾನೆ , ನಾನು ಫುಲ್ಲು ಫಿದಾ. ಅಷ್ಟಕ್ಕೇ ಮುಗಿಲಿಲ್ಲ ಸೀದ ನನ್ನ ಕಡೆಗೆ ಬಂದು ಏನೋ ನೋಟಿಸ್ ಬಗ್ಗೆ ಹೇಳಿ ಹೋಗುತ್ತಾನೆ. ಅದೇನೋ ಹೇಳುತ್ತಾರಲ್ಲ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಾಗೆ ಆಗೋದು ಎಂದು ಹಾಗೇ ಇತ್ತು ನನ್ನ ಪರಿಸ್ಥಿತಿ. ನೋಟಿಸ್ ಏನೂ ಅನ್ನೋದು ನನ್ನ ತಲೆಯೊಳಗೆ ಹೋಗಿಲ್ಲಾ ಎಂದು ಅದಾಗ್ಲೇ ನನ್ನ ಪಕ್ಕದಲ್ಲಿದ್ದ ನನ್ನ ಗೆಳತಿಗೆ ಅರಿವಾಗಿತ್ತು. ಅದಾದ ಮೇಲೆ ಫ್ರೆಂಡ್ಸೆಲ್ಲಾ ನನ್ನನ್ನು ಇನ್ನೂ ಜಾಸ್ತಿ ಗೇಲಿ ಮಾಡಲು ಶುರು ಮಾಡಿದರು. ನಾನು ನೋಡಲು ಶಾರ್ಟು ಅವನು ಸ್ವಲ್ಪ ಹೈಟು ಆದ್ದರಿಂದ ಟಾಲ್ ಬಾಯ್, ಶಾರ್ಟ್ ಗರ್ಲ್ ಪರ್ಫೆಕ್ಟ್ ಪೇರ್ ಹೀಗೆ ಏನೇನೋ ಹೇಳುತ್ತಿದ್ದರು. ನಾನು ಅವರೆದುರಿಗೆ ಏನೂ ಪ್ರತಿಕ್ರಿಯಿಸದಿದ್ದರೂ ನನಗೆ ಮನಸೊಳಗೆ ತುಂಬಾ ಖುಷಿಯಾಗುತ್ತಿತ್ತು ಅವರ ಆ ಗೇಲಿ, ತಮಾಷೆಗಳು.

ಆಮೇಲಿನ ದಿನಗಳು ಹೇಗಾಗಿತ್ತು ಅಂದರೆ ಅವನನ್ನು ನೋಡಿದ ದಿನ ನನಗೆ ಲಕ್ಕೀ ಡೇ, ಅವನು ನೋಡಲು ಸಿಗದ ದಿನಗಳು ಕಷ್ಟವಾಗುತ್ತಿತ್ತು. ಅವನನ್ನು ನೋಡಿದಾಗಲೆಲ್ಲಾ ಒಂದು ಪೆದ್ದು ಪೆದ್ದು ನಗು ಕೊಡುವುದು ನನಗೆ ರೂಢಿಯಾಗಿ ಹೋಗಿತ್ತು. ನನ್ನ ಫ್ರೆಂಡ್ಸ್ ಏನೂ ಕಮ್ಮಿ ಇರಲಿಲ್ಲ. ಏನೋ ಒಂದು ನೆಪ ಹಿಡಿದುಕೊಂಡು ಅವನ ಹತ್ತಿರ ಹೋಗುವುದು, ಹೋಗುವಾಗ ನನ್ನನ್ನೂ ಎಳೆದುಕೊಂಡು ಹೋಗುತ್ತಿದ್ದರು.

Advertisement

ಕಾಲೇಜಿನ ಆ ಕಡೆ ಮೆಟ್ಟಿಲಿನಿಂದ ಅವನು ಬಂದರೆ ಈ ಕಡೆ ಸ್ಟೆಪ್ ನಿಂದ ನಾವು ಅವನನ್ನು ನೋಡೋಕೆ ಓಡುವುದು, ಅವನು ನನ್ನನ್ನು ನೋಡುತ್ತಿದ್ದನಾ ಎಂದು ನೋಡಲು ಫ್ರೆಂಡ್ಸ್ ಜೊತೆ ಹೇಳುವುದು, ಅವನು ನೋಡುತ್ತಿದ್ದಾನಾ ಎಂದು ನೋಡಲು ಹೋಗಿ ನಾನು ಅವನನ್ನು ನೋಡುತ್ತಿರುವುದು ಅವನಿಗೆ ಗೊತ್ತಾಗಿ ಸಿಕ್ಕಿಬಿದ್ದು ಆಮೇಲೆ ಏನೂ ಗೊತ್ತಿಲ್ಲದೇ ಇರೋ ಹಾಗೆ ನಾಟಕ ಮಾಡುವುದು ಇದೆಲ್ಲಾ ಆರಂಭವಾಗಿತ್ತು.

ನಾನು ಅವನನ್ನು ನೋಡಿ ನಕ್ಕಾಗ ಅವನೂ ಮುಗುಳ್ನಗುತ್ತಿದ್ದ. ಅವನ ಆ ಮುಗುಳ್ನಗು, ಮೌನ ನನ್ನ ಮನಸ್ಸನ್ನು ಆವರಿಸಿತ್ತು. ಅದೇ ಕಾರಣಕ್ಕೆ ಅವನು ಮುಗುಳ್ನಗದೇ ಹೋದಲ್ಲಿ ನನಗೆ ಅವನ ಮೇಲೆ ತುಂಬಾ ಸಿಟ್ಟು ಬರುತ್ತಿತ್ತು. ಮತ್ತು ಇನ್ನು ನಾನು ಅವನ ಮುಖವನ್ನೇ ನೋಡುವುದಿಲ್ಲ ಎಂದು ಫ್ರೆಂಡ್ಸ್ ಜೊತೆ ಹೇಳುತ್ತಿದ್ದೆ. ಆದರೆ ಹಾಗೆ ಹೇಳಿದ ಮರುಕ್ಷಣ ಅವನು ಎದುರು ಬಂದಾಗ ನನಗೇ ತಿಳಿಯದೆ ನಗುವಿನ ಜೊತೆಗೆ ನನ್ನ ಮುಖವು ಅರಳುತ್ತಿತ್ತು.

ಈ ಕೋಪ, ನಗು, ಮೌನ, ಗೊಂದಲ ಏನು ಇದು ಯಾವುದರ ಸೂಚನೆ ಎಂದು ಯೋಚಿಸುವಷ್ಟರಲ್ಲಿ ಪರೀಕ್ಷೆ ಮುಗಿದು ರಜಾ ದಿನಗಳು ಆರಂಭವಾಗಿದ್ದವು. ಆ ವೇಳೆ ನನ್ನ ಮನಸಿನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಗೆಳೆಯರ ಮನಸಿನಲ್ಲಿಯೂ ಇವಳಿಗೇನಾಗಿದೆ ಇತ್ತೀಚಿನ ದಿನಗಳಲ್ಲಿ ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ಅನಿಸಲು ಶುರುವಾಗಿತ್ತು. ಆದರೆ ಈಗ ಸಿಕ್ಕಿದ ರಜೆಯ ದಿನಗಳನ್ನು ಮಸ್ತ್ ಮಜಾ ಮಾಡುವ ಸಮಯ ಆದ್ದರಿಂದ ಈ ಎಲ್ಲಾ ಗೊಂದಲ ಹಾಗೂ ಪ್ರಶ್ನೆಗಳಿಗೆ ರಜೆ ಮುಗಿಸಿ ಬಂದ ಮೇಲೆ ಉತ್ತರ ಹುಡುಕಿದರಾಯಿತು ಎಂದು ಎಲ್ಲರೂ ಹಾಸ್ಟೆಲ್‌ಗಳಿಂದ ತಮ್ಮ ತಮ್ಮ ಮನೆಯ ದಾರಿ ಹಿಡಿದೆವು.

ಪಲ್ಲವಿ ಕೋಂಬ್ರಾಜೆ
ಪ್ರಥಮ ಎಮ್.ಸಿ.ಜೆ
ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next