Advertisement
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಸಮೀಪದ ಜಾಲಾಡಿ – ಸಂತೋಷನಗರ ಮಧ್ಯೆ “ಡಿವೈಡರ್ ಕ್ರಾಸಿಂಗ್’ಗೆ ಅಲ್ಲಿನ ಜನ ಬೇಡಿಕೆ ಸಲ್ಲಿಸಿದ್ದರೂ ಅದಕ್ಕೆ ಅನುಮತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸಿರುವ ಕುರಿತಂತೆ “ಉದಯವಾಣಿ ಸುದಿನ’ವು ಸೆ. 28ರಂದು ವಿಸ್ತೃತವಾದ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ ಜಾಲಾಡಿ, ಸಂತೋಷನಗರ, ಬುಗುರಿಕಡು ಪರಿಸರದ ಜನ ಶಾಸಕರ ಗಮನಕ್ಕೆ ತಂದಿದ್ದು, ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಜಾಲಾಡಿ ಹಾಗೂ ಸಂತೋಷನಗರದ ಜನ ಹೆಮ್ಮಾಡಿ ಸರ್ಕಲ್ ಅಥವಾ ತಲ್ಲೂರು ಜಂಕ್ಷನ್‌ಗೆ ಹೋಗಿ ಸುತ್ತು ಬಳಸಿಕೊಂಡು ಬರಬೇಕಾಗಿದೆ. ಇಲ್ಲದಿದ್ದರೆ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸಬೇಕು ಅಥವಾ 3 ಕಿ.ಮೀ. ದೂರದ ತಲ್ಲೂರು ಪೇಟೆಗೆ ಹೋಗಿ ತಿರುಗಿಸಿ ಬರಬೇಕು. ಕೆಲವರು ಅನಿವಾರ್ಯವಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಇದು ಅಪಾಯಕಾರಿಯಾಗಿದ್ದು, ಅನಿರೀಕ್ಷಿತ ಅವ ಘಡಗಳು ಸಂಭವಿಸುತ್ತಿವೆ. ಈ ಕಾರಣಕ್ಕೆ ಹೆಮ್ಮಾಡಿ ಜಂಕ್ಷನ್‌ನಿಂದ ಜಾಲಾಡಿಯವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು ಎನ್ನುವ ಬೇಡಿಕೆ ಇಲ್ಲಿನ ಜನರದ್ದಾಗಿದೆ.