Advertisement

ಮುದ್ದಿನ ಮಾತಾಡುತ್ತಾ ಮೂರು ನಾಮ ಹಾಕಿದಳು!

09:44 AM Jan 30, 2020 | mahesh |

ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ ಅಲ್ಲ, ಬೇರೆಯವರಿಗೂ ಗೊತ್ತು. ಇಲ್ಲಿನ ಟ್ರಾಫಿಕ್‌ ಅಷ್ಟು ಫೇಮಸ್‌.

Advertisement

ಆಫೀಸಿನಿಂದ ಮನೆ ಕಡೆಗೆ ಧಾವಿಸುತ್ತಿದ್ದ ಬೈಕ್‌, ಕಾರು ಸವಾರರು ಒಂದೆಡೆ, ಧೋ ಅಂತ ಸುರಿಯುತ್ತಿದ್ದ ಮಳೆ ಇನ್ನೊಂದೆಡೆ. ಎರಡೂ ಸೇರಿ, ಟ್ರಾಫಿಕ್‌ ಬಿಗಡಾಯಿಸಿತ್ತು. ಕಿಕ್ಕಿರಿದು ತುಂಬಿ ಹೋಗಿದ್ದ ಬಸ್‌ನೊಳಗೆ ಕುಳಿತಿದ್ದ ನಾನು, ಕ್ಷಣವೊಂದು ಯುಗವಾದಂತೆ ಚಡಪಡಿಸುತ್ತಿದ್ದೆ. ಯಾವಾಗೊಮ್ಮೆ ಬಸ್‌ನಿಂದ ಇಳಿಯುತ್ತೀನೋ ಅಂತಾಗಿತ್ತು ನನಗೆ. ನನ್ನ ಪಕ್ಕ ಒಬ್ಬ ಮಹಿಳೆ ಕುಳಿತಿದ್ದರು. ಸ್ವಲ್ಪ ಸಮಯದ ನಂತರ, ಮುದುಕಿಯೊಬ್ಬಳು, ಬಸ್‌ ಹತ್ತಿದಳು. ಆಕೆಗೆ ಕುಳಿತುಕೊಳ್ಳಲು ಜಾಗ ಇರಲಿಲ್ಲ. ಕನಿಕರದಿಂದ ನಾವೇ ಸ್ವಲ್ಪ ಸರಿದು, ಆಕೆಗೆ ಕೂರಲು ಜಾಗ ಮಾಡಿಕೊಟ್ಟೆವು. ಇಬ್ಬರ ಸೀಟಿನಲ್ಲಿ ಮೂವರು ಕುಳಿತಿದ್ದರಿಂದ, ಪ್ರಯಾಣ ಮತ್ತಷ್ಟು ಕಷ್ಟವಾಗತೊಡಗಿತು. ಸಮಯ ಕಳೆಯಲೆಂದು, ಮೊಬೈಲ್‌ನಲ್ಲಿ ಧಾರಾವಾಹಿ ನೋಡೋಣ ಅಂದುಕೊಂಡೆ. (ಬಸ್‌ನಲ್ಲಿ ನಾನು ಮೊಬೈಲ್‌ ಅನ್ನು ಬ್ಯಾಗಿನಿಂದ ಹೊರ ತೆಗೆಯುವುದು ತುಂಬಾ ಅಪರೂಪ) ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲು ಹೊರ ತೆಗೆದು, ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿ, ಸ್ಕ್ರೀನ್‌ ಮೇಲೆ ಕಣ್ಣು ನೆಟ್ಟು, ನೋಡತೊಡಗಿದೆ.

ಐದು ನಿಮಿಷದ ನಂತರ ಪಕ್ಕದವಳು, ಭುಜ ತಟ್ಟಿದಳು. “ನಾನೂ ಆ ಧಾರಾವಾಹಿ ನೋಡ್ತೀನಿ. ನಿಮಗೆ ಅಭ್ಯಂತರ ಇಲ್ಲವಾದ್ರೆ, ನಾನೂ ನೋಡೊºàದಾ?’ ಅಂತ ಕೇಳಿದಳು. “ಓಹೋ, ಧಾರಾಳವಾಗಿ’ ಅಂತ ನಾನು ಹಿಂದೆಮುಂದೆ ನೋಡದೆ ಒಪ್ಪಿಕೊಂಡೆ ಸ್ವಲ್ಪ ಸಮಯದ ನಂತರ ಇಬ್ಬರೂ, ನಮಗೆ ಯಾವ ಧಾರಾವಾಹಿ ಇಷ್ಟ, ಅದರಲ್ಲಿ ಯಾವ ಪಾತ್ರ ಇಷ್ಟ, ಯಾವುದು ಇಷ್ಟವಿಲ್ಲ ಅಂತ ಮಾತಾಡಿಕೊಂಡೆವು. “ನೀವು ಯಾವ ಸ್ಟಾಪ್‌ನಲ್ಲಿ ಇಳಿಯಬೇಕು?’ ಅಂತ ಆಕೆ ಕೇಳಿದಾಗ, ನಾನು ಇನ್ನೂ ಮೂರು ಸ್ಟಾಪ್‌ ಇದೆ ಅಂದಳು. ಆಗ ಅವಳು, “ನಾನು ಮುಂದಿನ ಸ್ಟಾಪ್‌ನಲ್ಲಿಯೇ ಇಳಿದುಕೊಳ್ಳಬೇಕು. ಸರಿ ಬರ್ತೀನಿ…’ ಅಂತ ಹೇಳಿ, ಎದ್ದು ಹೊರಟಳು. “ಅಯ್ಯೋ ಇವಳಾ, ಇಷ್ಟು ಹೊತ್ತು ಚೆನ್ನಾಗಿ ಮಾತಾಡಿದವಳು ಈಗ ಅವಸರದಲ್ಲಿ ಹೊರಟೇ ಹೋದಳಲ್ಲ…ಒಂದು ಥ್ಯಾಂಕ್ಸ್‌ ಕೂಡಾ ಹೇಳಲಿಲ್ಲ…’ ಅಂತ ನಾನು ಮತ್ತೆ ಮೊಬೈಲ್‌ ನೋಡತೊಡಗಿದೆ. ಏಳೆಂಟು ನಿಮಿಷದ ನಂತರ ನನ್ನ ನಿಲ್ದಾಣವೂ ಬಂತು. ಮೊಬೈಲ್‌ ಒಳಗಿಡೋಣ ಅಂತ ವ್ಯಾನಿಟಿ ಬ್ಯಾಗ್‌ಗೆ ಕೈ ಹಾಕಿದರೆ, ಅದರ ಜಿಪ್‌ ಓಪನ್‌ ಆಗಿತ್ತು. ಅರೆ, ಮೊಬೈಲ್‌ ಹೊರ ತೆಗೆಯುವಾಗ ಜಿಪ್‌ ಹಾಕಿದ್ದೆನಲ್ಲ ಅಂತ, ಒಳಗೆ ಕೈ ಹಾಕಿದರೆ ಪರ್ಸ್‌ ಮಾಯವಾಗಿತ್ತು! ಬಸ್‌ ಹತ್ತುವ ಮುನ್ನ, ಬಸ್‌ಛಾರ್ಜ್‌ಗೆ ಬೇಕಾದ ಚಿಲ್ಲರೆಯನ್ನು ಕೈಯಲ್ಲಿಟ್ಟುಕೊಂಡು, ಪರ್ಸು-ಮೊಬೈಲ್‌ ಅನ್ನು ಒಳಗಿರಿಸಿದ್ದು ಚೆನ್ನಾಗಿ ನೆನಪಿತ್ತು. ಮೊಬೈಲ್‌ ತೆಗೆಯುವಾಗಲೂ ಪರ್ಸ್‌ ಅಲ್ಲಿಯೇ ಇತ್ತು. ಸೀಟಿನ ಮೇಲೆ, ಕೆಳಗೆ ಎಲ್ಲೂ ಪರ್ಸ್‌ ಬಿದ್ದಿರಲಿಲ್ಲ. ಆಗ ಗೊತ್ತಾಯ್ತು, ಪಕ್ಕ ಕುಳಿತಿದ್ದ ಮಹಿಳೆ ಯಾಕೆ ಅಷ್ಟು ಅವಸರ ಅವಸರದಲ್ಲಿ ಇಳಿದು ಹೋದಳು ಅಂತ. ನೋಡೋಕೆ ಸಭ್ಯಸ್ಥಳಂತೆ ಕಾಣುತ್ತಿದ್ದ ಆಕೆ, ಕಳ್ಳಿ ಅಂತ ಮನಸ್ಸು ಒಪ್ಪದಿದ್ದರೂ, ಕಳೆದು ಹೋದ ಪರ್ಸು, ಅದರೊಳಗಿದ್ದ ಎರಡು ಸಾವಿರದ ಮೂರು ನೋಟು, ಅವಳತ್ತಲೇ ಬೊಟ್ಟು ಮಾಡುತ್ತಿದ್ದವು! ಧಾರಾವಾಹಿ ನೋಡುತ್ತಾ ಮೈಮರೆತ ತಪ್ಪಿಗೆ ನನ್ನನ್ನು ನಾನು ಶಪಿಸಿಕೊಳ್ಳದೆ ಬೇರೆ ದಾರಿ ಕಾಣಲಿಲ್ಲ!

-ಲಕ್ಷ್ಮಿ ಜಗದೀಶ್‌

Advertisement

Udayavani is now on Telegram. Click here to join our channel and stay updated with the latest news.

Next