Advertisement
ನಟಸಾರ್ವಭೌಮ– ಸಹಜವಾಗಿಯೇ ಈ ಹೆಸರು ಕೇಳಿದಾಗ ಅಣ್ಣಾವ್ರ ನೆನಪಾಗುತ್ತೆ. ಅಷ್ಟೇ ಅಲ್ಲ, ಆ ಹೆಸರು ರಾಜ್‌ಕುಮಾರ್ ಹೊರತಾಗಿ ಬೇರಾರಿಗೂ ಸರಿಹೊಂದಲ್ಲ ಅನ್ನುವುದೂ ಅಷ್ಟೇ ಸರಿ. ಅಂಥದ್ದೊಂದು ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡೋಣ ಅಂತ ಹೊರಟಾಗ, ಸ್ವತಃ ಪುನೀತ್‌ರಾಜ್‌ಕುಮಾರ್ ಅವರಿಗೇ ಅದು ಭಯ ಹುಟ್ಟಿಸಿದ್ದು ಸುಳ್ಳಲ್ಲ. ಈ ಬಗ್ಗೆ ಪುನೀತ್ ಹೇಳುವುದಿಷ್ಟು, “ಇಡೀ ಟೀಮ್ ಬಂದು “ನಟಸಾರ್ವಭೌಮ’ ಶೀರ್ಷಿಕೆ ಇಡುವುದಾಗಿ ಹೇಳಿದಾಗ, ವೈಯಕ್ತಿಕವಾಗಿ ನನಗೆ ಅದು ಬೇಡ ಅಂತಾನೇ ಇತ್ತು. ಆ ಟೈಟಲ್ ಬಗ್ಗೆ ಭಯ ಕೂಡಾ ಇತ್ತು. ಯಾರೇ ಯಾವ ದೃಷ್ಟಿಯಿಂದ ಹೇಳಿದರೂ ವೈಯಕ್ತಿಕವಾಗಿ ನನಗೆ ಮಾತ್ರ ಆ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಲು ಭಯವಿತ್ತು. ನಾನು ಅವರ ಮಗನಾಗಿ, ಅಭಿಮಾನಿಯಾಗಿ ಅಣ್ಣಾವ್ರ ಹೆಸರಿನಡಿ ಚಿತ್ರವನ್ನು ಹೇಗೆ ಮಾಡಬೇಕು, ಏನು ಮಾಡಬೇಕು ಎಂಬ ಪ್ರಶ್ನೆ ಕಾಡಿದ್ದು ನಿಜ. ಯಾಕೆಂದರೆ, “ನಟಸಾರ್ವಭೌಮ’ ಅನ್ನೋ ಪದವೇ ಒಂದು ಫೋರ್ಸ್. ಆ ಶೀರ್ಷಿಕೆ ಇಟ್ಟರೆ, ಅವರವರೇ ಹೀಗೆ ಬೆನ್ನುತಟ್ಟಿಕೊಳ್ಳೋಕೆ ಇಟ್ಟುಕೊಳ್ತಾರಾ ಎಂಬ ಮಾತುಗಳು ಕೇಳಿಬಂದರೆ ಹೇಗೆ ಎಂಬ ಸಣ್ಣ ಭಯ ಮನಸ್ಸಲ್ಲಿತ್ತು. ಆದರೆ, ರಾಕ್‌ಲೈನ್ ವೆಂಕಟೇಶ್ ಮತ್ತು ಪವನ್ ಒಡೆಯರ್‌ಗೆ ಶೀರ್ಷಿಕೆ ಇಷ್ಟ ಆಗಿತ್ತು. ಹಲವರಿಗೆ ಆ ಶೀರ್ಷಿಕೆ ಬಗ್ಗೆ ಕೇಳಿದಾಗ, ಯಾವುದೇ ಕಂಪ್ಲೆಂಟ್ ಕೇಳಿಬರಲೂ ಇಲ್ಲ. ಹಾಗಾಗಿ, ನಾನು ಕೂಡಾ ಒಪ್ಪಿಕೊಂಡೆ. ಕಥೆ, ಪಾತ್ರಕ್ಕೂ ಸರಿ ಹೊಂದಿಕೆಯಾಗಿತ್ತು. ಕೊನೆಗೆ ವೈ ನಾಟ್ ಅಂತ ಅದೇ ಶೀರ್ಷಿಕೆ ಪಕ್ಕಾ ಮಾಡಿ, ಚಿತ್ರ ಮಾಡಿದ್ದೇವೆ’ ಎಂದು ಟೈಟಲ್ ಇಟ್ಟುಕೊಳ್ಳುವ ಮುನ್ನ ಇದ್ದಂತಹ ಭಯದ ಬಗ್ಗೆ ಹೇಳಿಕೊಂಡರು ಪುನೀತ್‌ರಾಜ್‌ಕುಮಾರ್.
ಈಗಾಗಲೇ ಎಲ್ಲರಿಗೂ ಚಿತ್ರದ ಟ್ರೇಲರ್‌ನಲ್ಲಿರುವ ಒಂದು ಅನೇಕರಲ್ಲಿ ಕುತೂಹಲ ಮೂಡಿಸಿದೆ. ಅದೇನೆಂದರೆ, “ನಟಸಾರ್ವಭೌಮ’ ಹಾರರ್ ಚಿತ್ರನಾ ಅಥವಾ ಇದೊಂದು ಆತ್ಮದ ಕಥೆ ಹೊಂದಿದೆಯಾ? ಈ ಪ್ರಶ್ನೆಗೆ ನಗುತ್ತಲೇ ಮಾತಿಗಿಳಿಯುವ ಪುನೀತ್, “ಹೌದು, ಈಗಾಗಲೇ ಟ್ರೇಲರ್ ಅಂಥದ್ದೊಂದು ಪ್ರಶ್ನೆಗೆ ಕಾರಣವಾಗಿದೆ. ಇಲ್ಲಿ ಅಂತಹ ಅಂಶಗಳಿವೆ. ಕಾಡುವ ಆತ್ಮ ಯಾರದ್ದು ಅಂತ ಎಲ್ಲವನ್ನೂ ಈಗಲೇ ಹೇಳಿಬಿಟ್ಟರೆ ಮಜಾ ಇರಲ್ಲ. ಸಿನಿಮಾ ನೋಡಿದಾಗ, ಅದು ಯಾವ ಜಾನರ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ’ ಎನ್ನುವ ಪುನೀತ್ ಅವರಿಗೆ “ನಟಸಾರ್ವಭೌಮ’ ರಾಕ್‌ಲೈನ್ ವೆಂಕಟೇಶ್ ಅವರ ಜೊತೆ ಮೂರನೇ ಚಿತ್ರ. ಆ ಕುರಿತು ಹೇಳಿಕೊಳ್ಳುವ ಅವರು, “ರಾಕ್‌ಲೈನ್ ವೆಂಕಟೇಶ್ ಫ್ಯಾಮಿಲಿ ಫ್ರೆಂಡ್. ತುಂಬಾ ಗ್ಯಾಪ್ ಬಳಿಕ ಈ ಚಿತ್ರ ಮಾಡುತ್ತಿದ್ದೇವೆ. ಹಾಗೆ ನೋಡಿದರೆ, 2013-14 ರಲ್ಲೇ ಅವರ ಜೊತೆಗೆ ಒಂದು ಚಿತ್ರ ಮಾಡಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಆಗ ಒಂದಷ್ಟು ಕಥೆ ಕೇಳಿದ್ದೆ. ಹಲವು ನಿರ್ದೇಶಕರು ಬಂದು ಕಥೆ ಹೇಳಿದ್ದರು. ಆದರೆ, ಈ ಚಿತ್ರದ ಕಥೆ 2013 ರಿಂದಲೇ ಓಡುತ್ತಿತ್ತು. ಈ ಹಿಂದೆ ನನ್ನ “ಅರಸು’ ಮತ್ತು “ಆಕಾಶ್’ ಚಿತ್ರಕ್ಕೆ ಕಥೆ ಮಾಡಿದ್ದ ಜನಾರ್ದನ್ ಮಹರ್ಷಿ ಅವರು ಈ ಚಿತ್ರಕ್ಕೆ ಕಥೆ ಮಾಡಿದ್ದರು. ಆ ಎಳೆ ಇಟ್ಟುಕೊಂಡು ಸುಮಾರು ಕಡೆ ಹೇಳುತ್ತಾ ಹೋಗಿದ್ದರು. ಕೊನೆಗೆ ರಾಕ್‌ಲೈನ್ ವೆಂಕಟೇಶ್, ಪವನ್ ಒಡೆಯರ್ ಈ ಚಿತ್ರ ಹಿಡಿದು ತಂದರು. ಹಾಗೆ ನೋಡಿದರೆ, ಪವನ್ ಒಡೆಯರ್ ಜೊತೆಗೆ ನನ್ನ ಎರಡನೇ ಚಿತ್ರವಿದು. “ರಣವಿಕ್ರಮ’ ಚಿತ್ರದಲ್ಲಿ ಗಡಿ, ನಾಡು, ಭಾಷೆಗೆ ಸಂಬಂಧಿಸಿದ ವಿಷಯವಿತ್ತು. “ನಟಸಾರ್ವಭೌಮ’ ಚಿತ್ರ ಬೇರೆ ಜಾನರ್‌ನಲ್ಲಿದೆ. ನಿರ್ದೇಶಕರ ಸ್ಕ್ರಿಪ್ಟ್ ಕೆಲಸ ಚೆನ್ನಾಗಿತ್ತು. ಸಾಕಷ್ಟು ಬದಲಾವಣೆಯೊಂದಿಗೆ ಕಥೆ ಹೊಸರೂಪ ಪಡೆಯಿತು. ಚಿತ್ರ ಕೂಡ ಹೊಸತಾಗಿಯೇ ಮೂಡಿಬಂದಿದೆ’ ಎಂಬುದು ಪುನೀತ್ ಮಾತು.
Related Articles
Advertisement
ಪ್ರೇಕ್ಷಕನ ನಿರೀಕ್ಷೆ ಸುಳ್ಳಾಗಬಾರದುಸಿನಿಮಾಗಳಲ್ಲಿ ಪಾರ್ಟಿ ಸಾಂಗ್, ಡಾಬಾ ಸಾಂಗ್ ಕಾಮನ್. ಇಲ್ಲೂ ಒಂದು ಪಾರ್ಟಿ ಸಾಂಗ್ ಇದೆ. ಎಣ್ಣೆ ಸಾಂಗ್ ಅಂದಾಕ್ಷಣ, ಆ ಚಿತ್ರದ ನಾಯಕ, ಕುಡ್ಕೊಂಡ್, ತೂರಾಡ್ಕೊಂಡ್ ಹಾಡಿ, ಕುಣಿಯೋದನ್ನು ನೋಡಿರುತ್ತೇವೆ. ಆದರೆ, ಇಲ್ಲಿರುವ “ಓಪನ್ ದ ಬಾಟಲ್’ ಸಾಂಗ್‌ನಲ್ಲಿ ಪುನೀತ್ ವಿಭಿನ್ನವಾಗಿ ಕಾಣಾ¤ರೆ. ಅವರು ಕುಡಿಯದೇ ಇದ್ದರೂ, ಕುಣಿಯುತ್ತಲೇ ಕಿಕ್ ಹೆಚ್ಚಿಸುತ್ತಾ ಹೋಗುತ್ತಾರೆ. ಆ ಬಗ್ಗೆ ಮಾತನಾಡುವ ಅವರು, “ಹೀರೋ ಆದವರಿಗೆ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಇರುತ್ತೆ. ಅದು ನನಗೂ ಇದೆ. ಆಗಿನಿಂದಲೂ ನಾವು ಹಾಗೆಯೇ ಉಳಿಸಿಕೊಂಡು ಬಂದಿರುವುದರಿಂದ, ಇಲ್ಲಿ ತುಂಬಾ ನೀಟ್ ಆಗಿರುವ, ಎಲ್ಲರಿಗೂ ಇಷ್ಟವಾಗುವ ರೀತಿ ಹೊಸತರಹದ ಶೈಲಿಯಲ್ಲಿ “ಓಪನ್ ದ ಬಾಟಲ್’ ಸಾಂಗ್ ಮಾಡಿದ್ದೇವೆ. ಅದು ಕ್ಲಾಸ್ ಆಗಿ ಮೂಡಿಬಂದಿದೆ’ ಎಂದು ನಗೆಬೀರುತ್ತಾರೆ ಪುನೀತ್. ಈ ಚಿತ್ರದಲ್ಲಿ ಪುನೀತ್ ಅವರದು ಫೋಟೋ ಜರ್ನಲಿಸ್ಟ್ ಪಾತ್ರ. ಆ ಪಾತ್ರಕ್ಕೆ ಅವರು ತಯಾರಿ ಮಾಡಿಕೊಂಡಿದ್ದರಾ ಎಂಬ ಪ್ರಶ್ನೆಗೆ ಉತ್ತರವಿದು. “ತಯಾರಿ ಎಂಥದ್ದೂ ಇಲ್ಲ. ಫೋಟೋ ಜರ್ನಲಿಸ್ಟ್‌ಗಳನ್ನು ನೋಡಿದ್ದೇನೆ. ಎಷ್ಟೋ ಸಲ ಅವರ ಕ್ಯಾಮೆರಾ ಪಡೆದು ಫೋಟೋ ಕ್ಲಿಕ್ಕಿಸೋಕೆ ಟ್ರೈ ಮಾಡಿದ್ದೇನೆ. ನನಗೂ ಫೋಟೋಗ್ರಫಿ ಕ್ರೇಜ್ ಇದೆ’ ಎನ್ನುತ್ತಾರೆ ಪುನೀತ್. ವಿಜಯ್ ಭರಮಸಾಗರ