Advertisement

ಕೇಂದ್ರ ಗೃಹ, ರೈಲ್ವೆ ಸಚಿವರ ಜತೆ ಸಿಎಂ ಚರ್ಚೆ

07:15 AM Aug 18, 2017 | Team Udayavani |

ಬೆಂಗಳೂರು: ಬರ ಪರಿಹಾರ ಕುರಿತ ಎನ್‌ ಡಿಆರ್‌ಎಫ್ ಮಾರ್ಗಸೂಚಿಗಳ ಸಡಿಲಿಕೆ ಮತ್ತು ಎಸ್‌ಡಿಆರ್‌ಎಫ್ ಅನುದಾನ ಹೆಚ್ಚಳ ಹಾಗೂ ಬೆಂಗಳೂರು -ಮೈಸೂರು-ಚೆನ್ನೈ ನಡುವೆ ಹೈಸ್ಪೀಡ್‌ ರೈಲು ಸೇರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಅಗತ್ಯ ಅನುಮತಿಯನ್ನು ತ್ವರಿತಗತಿಯಲ್ಲಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ದೆಹಲಿಯಲ್ಲಿ ಗುರುವಾರ ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್‌ಸಿಂಗ್‌ ಹಾಗೂ ರೈಲ್ವೆ ಸಚಿವ ಸುರೇಶ್‌ಪ್ರಭು ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ಬರ ಹಾಗೂ ರೈಲ್ವೆ ಯೋಜನೆಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ನಿರಂತರ ಬರ ಇರುವುದರಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವುದರ ಜತೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ಸಡಿಲಿಕೆ ಮಾಡಬೇಕು. ರಾಜ್ಯದಲ್ಲಿ ನಿರಂತರ ಬರ ಇದ್ದರೂ ಎಸ್‌ಡಿಆರ್‌ಎಫ್ನಡಿ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ 1,527 ಕೋಟಿ ರೂ.ಮಾತ್ರ ಬಿಡುಗಡೆ ಮಾಡಿದೆ.

ಇದೇ ಅವಧಿಯಲ್ಲಿ ಮಹಾರಾಷ್ಟ್ರಕ್ಕೆ 8,195 ಕೋಟಿ ರೂ., ಗುಜರಾತ್‌ಗೆ 3,894 ಕೋಟಿ ರೂ., ತಮಿಳುನಾಡಿಗೆ 3,751 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಕರ್ನಾಟಕಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರಿಗೆ ಮನವಿ ಸಲ್ಲಿಸಿದರು.

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್‌ ಡಿಆರ್‌ಎಫ್ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದ್ದು, ಇದರಿಂದ ರಾಜ್ಯದ ರೈತರಿಗೆ ಪರಿಹಾರ ಸಿಗದೆ ಅನ್ಯಾಯವಾಗಲಿದೆ. ಶೇ.50ರಷ್ಟು ಬೆಳೆನಷ್ಟ, ಶೇ.50 ತೇವಾಂಶ ಮಾನದಂಡ ಅನುಸರಿಸಿದರೆ ಯಾರಿಗೂ ಪರಿಹಾರ ಸಿಗುವುದಿಲ್ಲ. ಹೀಗಾಗಿ, ಮಾರ್ಗಸೂಚಿ ಸಡಿಲಿಕೆ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಪ್ರಧಾನಿಗೆ ಪತ್ರ ಸಹ ಬರೆಯಲಾಗಿದೆ ಎಂಬುದನ್ನು ಗೃಹ ಸಚಿವರ ಗಮನಕ್ಕೆ ತಂದರು.

Advertisement

ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ: ಕೇಂದ್ರ ರೈಲ್ವೆ ಸಚಿವ ಸುರೇಶ್‌ಪ್ರಭು ಅವರ ಜತೆ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿ, ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗಕ್ಕೆ ಪರಿಸರ ಇಲಾಖೆ ನಿರಾಕ್ಷೇಪಣಾ ಪತ್ರವನ್ನು ತ್ವರಿತವಾಗಿ ಕೊಡಿಸಬೇಕು. ಕೋಲಾರದಲ್ಲಿ ರೈಲ್ವೆ ಬೋಗಿ ಕಾರ್ಖಾನೆ ಸ್ಥಾಪನೆ ಯೋಜನೆಗೆ ರಾಜ್ಯ ಸರ್ಕಾರ ಉಚಿತ ಜಮೀನು ನೀಡಿದ್ದು, 50 ಕೋಟಿ ರೂ. ಸಹ ಬಜೆಟ್‌ನಲ್ಲಿ ಮೀಸಲಿಟ್ಟಿದೆ. 

ಕೇಂದ್ರದಿಂದ ಅಗತ್ಯ ಅನುಮತಿ ಬೇಕಾಗಿದೆ. ಮೈಸೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವುದರಿಂದ ಮೈಸೂರು ರೈಲ್ವೆ ನಿಲ್ದಾಣವನ್ನ ಅಂತಾರಾಷ್ಟ್ರೀಯ ಮಾದರಿಯ ರೈಲು ನಿಲ್ದಾಣವಾಗಿ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು -ಮೈಸೂರು-ಚೆನ್ನೈ ನಡುವೆ ಹೈಸ್ಪೀಡ್‌ ರೈಲು ಪ್ರಾರಂಭಕ್ಕೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಉಪ ನಗರ ಜನಸಂಖ್ಯೆಯ ಅನುಕೂಲಕ್ಕೆ ಮೈಸೂರು, ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ಉಪನಗರ ರೈಲು
ಪ್ರಾರಂಭಿಸಬೇಕು. ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಕಲಬುರಗಿ ನಗರಗಳಿಗೆ ಸಂಪರ್ಕ ಕಲ್ಪಿಸಲು ಹೆಚ್ಚು ರೈಲು ಪ್ರಾರಂಭಿಸ ಬೇಕೆಂದು ಮನವಿಯಲ್ಲಿ ತಿಳಿಸಿದರು.

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಿಸಲು ಬೆಂಗಳೂರಿನಿಂದ ವೈಟ್‌ಫೀಲ್ಡ್‌ಗೆ ನಾಲ್ಕು ಜೋಡಿ ರೈಲು ಮಾರ್ಗ, ಕಂಟೋನ್ಮೆಂಟ್‌ನಿಂದ ವೈಟ್‌ಫೀಲ್ಡರ್‌ಗೆ ಮೂರನೆ ಲೈನ್‌ ನಿರ್ಮಾಣದ ಪ್ರಸ್ತಾಪ ರೈಲ್ವೆ ಮಂಡಳಿ ಮುಂದಿದ್ದು ಅನುಮತಿ ಬೇಕಿದೆ. ಬೆಂಗಳೂರಿನ ಯಲಹಂಕ, ಯಶವಂತಪುರ, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಅಭಿವೃದ್ಧಿ. 72 ರೈಲ್ವೆ ನಿಲ್ದಾಣಗಳಲ್ಲಿ ರೂಪ್‌ಟಾಪ್‌ ಸೋಲಾರ್‌ ಪ್ಲಾಟ್‌ ಅಳವಡಿಸುವುದು ಯೋಜನೆಗಳಿಗೆ ತ್ವರಿತವಾಗಿ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next