ಮೂರು ವರ್ಷಗಳ ಹಿಂದೆ ನನ್ನ ಮಗಳು ಆಗಾಗ್ಗೆ ಹೊಟ್ಟೆನೋವು ಅನ್ನುತ್ತಿದ್ದಳು. ನಮ್ಮ ಫ್ಯಾಮಿಲಿ ಡಾಕ್ಟರನ್ನು ಕೇಳಿದರೆ, ಅವೆಲ್ಲ ಈ ವಯಸ್ಸಿನ ಪುಟ್ಟ ಮಕ್ಕಳಿಗೆ ಸಾಮಾನ್ಯ. ಭಯಪಡಬೇಡಿ ಅನ್ನುತ್ತಿದ್ದರು. ಅದೊಂದು ದಿನ ಮತ್ತೆ ಆಕೆ ಹೊಟ್ಟೆನೋವು ಎಂದಾಗ ಬೇರೆಯ ವೈದ್ಯರಿಗೆ ತೋರಿಸುವ ನಿರ್ಧಾರ ಮಾಡಿದೆವು.
ನನ್ನ ಪತ್ನಿಯೇ, ನಾನಿಲ್ಲದಾಗ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ತೋರಿಸಿದ್ದಳು. ಆತ ಆರ್ಮಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದವರಂತೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ¨ªಾಗ, ಮಗುವನ್ನು ನೋಡಿದಾಕ್ಷಣ ಕನಿಷ್ಠ ಸೌಜನ್ಯದಿಂದಲೂ ಮಾತನಾಡದೇ, ನನ್ನ ಪತ್ನಿಗೆ “ಏಕಿಷ್ಟು ತಡ ಮಾಡಿದಿರಿ?’ ಅಂತ ಮುಖ ಗಂಟಿಕ್ಕಿಕೊಂಡೇ ಬೈದರಂತೆ. ಅವರ ಮಾತು ಕೇಳಿದ ಮೇಲೆ, ಸಹಜವಾಗಿಯೇ ಮಗುವಿಗೆ ಏನೋ ಗಂಭೀರ ಕಾಯಿಲೆ ಇರಬಹುದೆಂದು ಭಯವಾಗಿತ್ತು. ನಾನು ಮರುದಿನ ಜೊತೆಯಲ್ಲಿ ಹೋದಾಗ ಏನೋ ಇರಬಹುದು ಅನ್ನುವ ರೀತಿಯಲ್ಲಿ, “ಒಮ್ಮೆ ಎಂಆರ್‌ಐ ಸ್ಕ್ಯಾನ್ ಮಾಡಿಸಿ ಬನ್ನಿ. ನೋಡೋಣ’ ಅಂದರು. ಅವರೇ ಒಂದು ದೊಡ್ಡ ಆಸ್ಪತ್ರೆಯಲ್ಲಿ, ಅವರಿಗೆ ತಿಳಿದಿರುವ ವೈದ್ಯರ ಜೊತೆ ಸ್ಕ್ಯಾನಿಂಗ್‌ಗೆ ದಿನಾಂಕ ನಿಗದಿ ಮಾಡಿದರು.
ನಾವು ಅಲ್ಲಿಗೆ ಹೋಗುವಷ್ಟರಲ್ಲಿ, ಅದೇ ದೊಡ್ಡ ಆಸ್ಪತ್ರೆಯ ಒಂದು ವಿಭಾಗದಲ್ಲಿ ಗೆಳತಿಯ ಪತಿ ಮಕ್ಕಳ ತಜ್ಞರಾಗಿದ್ದಾರೆ ಎಂದು ತಿಳಿಯಿತು. ಎಂಆರ್‌ಐ ಸ್ಕ್ಯಾನ್‌ಗೆ ಆಗಲೇ ದುಡ್ಡು ಕಟ್ಟಿಯಾಗಿತ್ತು. ಇನ್ನೂ ಒಂದು ಗಂಟೆ ಕಾಯಬೇಕಿತ್ತು. ಆ ಮಧ್ಯೆ ಪರಿಚಯದ ಆ ಡಾಕ್ಟರನ್ನು ಭೆಟ್ಟಿಯಾಗಲು ಹೋದೆವು. ಅವರು ಕೂಲಂಕುಷವಾಗಿ ಪರೀಕ್ಷಿಸಿ, ಎಂಆರ್‌ಐ ಅವಶ್ಯಕತೆಯೇ ಇಲ್ಲ ಅಂತ ಹೇಳಿದ್ದಷ್ಟೇ ಅಲ್ಲ. ಅಷ್ಟು ಚಿಕ್ಕ ಮಕ್ಕಳಿಗೆ ಅದರಿಂದಾಗುವ ದುಷ್ಪರಿಣಾಮವನ್ನು ವಿವರಿಸಿ, ಸ್ಕ್ಯಾನ್ ಮಾಡಿಸಲು ಹೇಳಿದ್ದ ಡಾಕ್ಟರ್‌ಗೆ ಸರಿಯಾಗಿ ಬೈದರು. ಕಡೆಗೆ ಅಲ್ಲಿ ಮಾತನಾಡಿ ಸ್ಕ್ಯಾನ್ ಮಾಡಿಸದೇ ಈಗಾಗಲೇ ಕಟ್ಟಿದ್ದ ಹಣವನ್ನು ಹಿಂದೆ ಕೊಡಿಸಿದರು. ಈ ವಿಷಯವನ್ನು ನಮ್ಮ ಫ್ಯಾಮಿಲಿ ಡಾಕ್ಟರರಿಗೆ ತಿಳಿದಾಗ ಸುಮ್ಮನೆ ಮುಗುಳ್ನಕ್ಕರು.
ನಾವು ದಿಗಿಲುಪಡುವ ಅನೇಕ ಆರೋಗ್ಯ ಸಂಬಂಧಿತ ವಿಷಯಗಳ ಹಿಂದೆ ನಮಗೆ ತಿಳಿಯದ ಕೆಲವು ವ್ಯವಹಾರಗಳಿರುತ್ತವೆ. ಎಲ್ಲವನ್ನೂ ವ್ಯವಹಾರದ ಕಣ್ಣಿಂದಲೇ ನೋಡುವ ಪ್ರಪಂಚದಲ್ಲಿ ನಾವು ತಕ್ಷಣಕ್ಕೆ ಭಾವೋಗ್ವೇದಕ್ಕೆ ಒಳಗಾಗದೇ ಆಲೋಚಿಸಿ ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕಷ್ಟೇ.
-ಎಲ್.ಎಂ. ಸಂತೋಷ್ ಕುಮಾರ್