ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಕುರಿತ ಔರಾದ್‌ಕರ್ ವರದಿ ಬಗ್ಗೆ ಮುಖ್ಯಮಂತ್ರಿಯವರಿಗೆ ಸದ್ಯದಲ್ಲೇ ಮಾಹಿತಿ ನೀಡಲಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಪೊಲೀಸರ ವೇತನದಲ್ಲಿ ಆಗಿರುವ ತಾರತಮ್ಯ ನಿವಾರಿಸಲಾಗುವುದು. ಔರಾದ್‌ಕರ್ ವರದಿ ಬಗ್ಗೆ ನಾನು ಕನ್ವಿನ್ಸ್ ಆಗಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಿದ್ದೇನೆ ಎಂದು ಹೇಳಿದರು.
ಪೊಲೀಸರ ಸಂಬಳ ನನ್ನ ಅವಧಿಯಲ್ಲಿ ಹೆಚ್ಚಾಗಲಿ ಎಂಬ ಆಸೆ ನನಗೂ ಇದೆ. ಹೀಗಾಗಿ, ನಾನು ಆ ಬಗ್ಗೆ ವಿಶೇಷ ಕಾಳಜಿ ವಹಿಸಲಿದ್ದೇನೆ. ಹಣಕಾಸು ಇಲಾಖೆ ಅಡ್ಡಿ ಮಾಡುತ್ತದೆ. ಆದರೂ ಹಣಕಾಸು ಸಚಿವರು ಮುಖ್ಯಮಂತ್ರಿಯವರೇ ಆಗಿರುವುದರಿಂದ ಅವರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಗೃಹ ಸಚಿವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಮಾಜಿ ಸಚಿವ ಸುರೇಶ್‌ಕುಮಾರ್ ಅವರ ಬಗ್ಗೆ ನನಗೆ ಗೌರವವಿದೆ. ನಾಳೆ ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆಯವರ ಹೆಸರಿನಲ್ಲೇ ಈ ರೀತಿಯ ನಕಲಿ ಲೆಟರ್ ಹೆಡ್ ಮಾಡಿದರೆ ಸುಮ್ಮನಿರುತ್ತಾರಾ? ಆದರೆ, ಆ ವಿಚಾರದಲ್ಲಿ ಇಬ್ಬರೂ ಬೆಂಬಲ ನೀಡಿದ್ದು ವಿಪರ್ಯಾಸ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿಯವರು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಆಪರೇಷನ್ ಕಮಲ ಆಪರೇಷನ್ ಕಮಲವಾಗಿಯೇ ಉಳಿಯಲಿದೆ. ಬಿಜೆಪಿಯು ಗೌರವಯುತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದರೆ ಒಳ್ಳೆಯದು
-ಎಂ.ಬಿ.ಪಾಟೀಲ್, ಗೃಹ ಸಚಿವ