ಭೋಪಾಲ್/ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆ ವಿರುದ್ಧ ದೆಹಲಿ-ಹರ್ಯಾಣ ಗಡಿಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಡಿಸೆಂಬರ್ 18, 2020) ವಿಡಿಯೋ ಕಾನ್ಫರೆನ್ಸ್ ಮೂಲಕ ಮಧ್ಯಪ್ರದೇಶದ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನ ಕಾನೂನಿನಲ್ಲಿ ರೈತರ ಹಿತ ಕಾಯಲಾಗಿದೆ ಎಂದು ಪುನರುಚ್ಚರಿಸಿದರು.
ಕೇಂದ್ರ ಸರ್ಕಾರ ರಾತ್ರಿ ಬೆಳಗಾಗುವುದರೊಳಗೆ ಈ ಕಾಯ್ದೆಗಳನ್ನು ಜಾರಿಗೆ ತಂದಿಲ್ಲ. ಕಳೆದ 22 ವರ್ಷಗಳಿಂದ ಕೃಷಿ ನೀತಿ ಸುಧಾರಣೆಗಾಗಿ ಪ್ರತಿ ಸರ್ಕಾರ, ರಾಜ್ಯ ಸರ್ಕಾರ ವಿಸ್ತ್ರತವಾಗಿ ಚರ್ಚಿಸಿವೆ. ಇದರಲ್ಲಿ ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಿಕ ತಜ್ಞರು, ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರು ಚರ್ಚಿಸಿದ್ದರು. ಆದರೆ ಈಗ ಯಾರು ತಮ್ಮ ಪ್ರಣಾಳಿಕೆಯಲ್ಲಿ ಹೊಸ ಕಾಯ್ದೆಯ ಭರವಸೆ ನೀಡಿದ್ದಾರೋ ಆ ಪಕ್ಷಗಳೇ ವಿರೋಧಿಸುತ್ತಿವೆ ಎಂದು ಟೀಕಿಸಿದರು.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೊದಲಿದ್ದ ಕಾನೂನಿನಲ್ಲಿ ರೈತರಿಗೆ ಹಲವು ಸಮಸ್ಯೆ ಇತ್ತು. ಹೊಸ ಕಾನೂನಿನಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈತರ ಬೆಳೆಗೆ ಒಂದೂವರೆ ಪಟ್ಟು ಎಂಎಸ್ ಪಿ ನೀಡಿದ್ದೇವೆ. ಇದು ನಮ್ಮ ಸರ್ಕಾರದ ಸಾಧನೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಹೊಸ ಕಾಯ್ದೆ ಪ್ರಕಾರ ಜಮೀನು ಖರೀದಿಗೂ ಒಪ್ಪಂದಕ್ಕೂ ಸಂಬಂಧವಿಲ್ಲ. ಬೆಳೆಗೆ ಮಾತ್ರ ಒಪ್ಪಂದ ಮಾಡಿಕೊಂಡರೆ ಸಾಕು. ಜಮೀನಿನ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕೆಂದಿಲ್ಲ. ಈ ಬಗ್ಗೆ ರೈತರಿಗೆ ಯಾವುದೇ ಅನುಮಾನ ಇದ್ದರು ಬಂದು ಚರ್ಚಿಸಲಿ ಎಂದರು.
ಮಧ್ಯಪ್ರದೇಶದಲ್ಲಿ ರೈತರ ಸಾಲಮನ್ನಾದ ಭರವಸೆ ಕೊಟ್ಟಿದೆ. ರಾಜಸ್ಥಾನದಲ್ಲಿ ಸಾಲಮನ್ನಾ ಭರವಸೆಗಾಗಿ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಘೋಷಣೆ ಮಾಡಿದ ಸಾಲಮನ್ನಾ ಮಾಡಿಲ್ಲ. ಸರ್ಕಾರ ರಚನೆ ವೇಳೆ ಏನೇನೊ ಸಬೂಬು ಹೇಳಿದರು. ರಾಜಕಾರಣ ಇಷ್ಟು ಕೀಳುಮಟ್ಟಕ್ಕೆ ಹೋಗುತ್ತದೆಯೇ? ಅದು ದೇಶದ ರೈತರ ಹೆಸರಿನಲ್ಲಿ. ಇದರ ಲಾಭ ಯಾರಿಗೆ ಸಿಗುತ್ತದೆ ಎಂದು ನೋಡಬೇಕಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ ಹಿಂಪಡೆಯಲ್ಲ ಎಂದು ಭರವಸೆ ನೀಡಿದ ಪ್ರಧಾನಿ ಮೋದಿ, ಹಿಂದಿನ ಸರ್ಕಾರಕ್ಕಿಂತ ನಮ್ಮ ಸರ್ಕಾರ ಎರಡು ಪಟ್ಟು ಹೆಚ್ಚು ಧಾನ್ಯ ಖರೀದಿಸಿದೆ. ದೊಡ್ಡ ರೈತರಿಗೆ ಪ್ರಯೋಜನ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಇರುವವರು ಹೀಗೆ ವಿರೋಧಿಸುತ್ತಿದ್ದಾರೆ. ಆಗ ಸಣ್ಣ ರೈತರನ್ನು ಕೇಳುವವರೇ ಇರಲ್ಲ ಎಂದು ಹೇಳಿದರು.
7-8ವರ್ಷದ ಹಿಂದೆ ರೈತರು ಯೂರಿಯಕ್ಕಾಗಿ ಕಾದು ಕುಳಿತಿರುತ್ತಿದ್ದರು. ಆಗ ಅವರಿಗೆ ಪೊಲೀಸರ ಲಾಠಿ ಏಟು ಬಿಟ್ಟು ಬೇರೆನೂ ಸಿಗುತ್ತಿರಲಿಲ್ಲವಾಗಿತ್ತು. ಈಗ ದೇಶದಲ್ಲಿ ಯೂರಿಯಾ ಕೊರತೆಯ ಸುದ್ದಿಯೇ ಇಲ್ಲ ಎಂದರು.