Advertisement

ಖಂಡ್ರೆ ರಾಜೀನಾಮೆ ಕೊಡ್ತೇನೆ ಅಂದ್ರೆ, ವಿ. ಸೋಮಣ್ಣ ನೇಣು ಹಾಕಿಕೊಳ್ತೇನೆ ಅಂದ್ರು

08:39 AM Feb 05, 2021 | Team Udayavani |

ಬೆಂಗಳೂರು: ವಸತಿ ಯೋಜನೆ ವಿಚಾರದಲ್ಲಿ ವಸತಿ ಸಚಿವ ವಿ.ಸೋಮಣ್ಣ ಹಾಗೂ ಭಾಲ್ಕಿ ಕಾಂಗ್ರೆಸ್‌ ಶಾಸಕ ಈಶ್ವರ ಖಂಡ್ರೆ ನಡುವೆ ಮಾತಿನ ಸಮರ ಹಾಗೂ ವೈಯಕ್ತಿಕ ಟೀಕೆಗಳ ಜಟಾಪಟಿಗೆ ಗುರುವಾರ ಸದನ ಸಾಕ್ಷಿಯಾಯಿತು.

Advertisement

ಒಂದು ಹಂತದಲ್ಲಿ ವಿ.ಸೋಮಣ್ಣ ನನ್ನಿಂದ ತಪ್ಪಾಗಿದ್ದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳಲು ಸಿದ್ಧ ಎಂದು ಸವಾಲು ಹಾಕಿದರು. ಆಗ, ಈಶ್ವರ್‌ ಖಂಡ್ರೆ ನಾನು ತಪ್ಪು ಮಾಡಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರತಿ ಸವಾಲು ಹಾಕಿದರು.

ಇದರ ನಡುವೆ ನಾನು ಟೋಪಿ ಹಾಕಿ ಗೋಲ್‌ ಮಾಲ್‌ ಮಾಡಿ ಬಂದವನಲ್ಲ ಎಂದು ಸೋಮಣ್ಣ ಹೇಳಿದಾಗ, ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿದ್ದೇನೆ. ನಿಮ್ಮ ಹಿನ್ನೆಲೆ ಏನು ಎಂದು ಈಶ್ವರ್‌ ಖಂಡ್ರೆ ಪ್ರಶ್ನಿಸಿದರು. ಇದು ಸದನದಲ್ಲಿ ಕೆಲಹೊತ್ತು ಬಿಸಿ ವಾತಾವರಣಕ್ಕೂ ಕಾರಣವಾಯಿತು. ಇಬ್ಬರನ್ನೂ ಸಮಾಧಾನಪಡಿಸುವಷ್ಟರಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಅವರಿಗೆ ಸಾಕು ಸಾಕಾಯಿತು.

ಇದನ್ನೂ ಓದಿ:ರಾಜ್ಯದಲ್ಲಿ 2 ಹಂತಗಳ ಪಂಚಾಯತ್‌ ವ್ಯವಸ್ಥೆ ಜಾರಿಗೆ ಬರುವ ದಿನ ಹತ್ತಿರವಾಗುತ್ತಿವೆ :ಈಶ್ವರಪ್ಪ

ಆಗಿದ್ದೇನು? ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಈಶ್ವರ್‌ ಖಂಡ್ರೆ, ಹಿಂದಿನ ಸರ್ಕಾರದಲ್ಲಿ ಮಂಜೂರಾದ ಮನೆಗಳು ಪೂರ್ಣಗೊಳ್ಳಲು ಹಣ ಪಾವತಿ ಮಾಡಿಲ್ಲ ಎಂದರು. ಇದಕ್ಕೆ ವಸತಿ ಸಚಿವ ವಿ.ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಸರ್ಕಾರದಲ್ಲಿ ಆಗಿದ್ದ ಅಕ್ರಮ ಸರಿಪಡಿಸಿದ್ದೇವೆ. ಭಾಲ್ಕಿಯಲ್ಲಿ 17 ಸಾವಿರ ಮನೆಗಳು ಮಂಜೂರಾಗಿದ್ದು ಶೇ.43 ರಷ್ಟು ಬೋಗಸ್‌ ಆಗಿವೆ. ಶಾಸಕರೇ ಆದೇಶ ಪತ್ರ ಕೊಟ್ಟಿದ್ದಾರೆ ಎಂದು ದೂರಿದರು.

Advertisement

ಇದರಿಂದ ಕುಪಿತಗೊಂಡ ಈಶ್ವರ್‌ ಖಂಡ್ರೆ, ನಾನು ಆದೇಶ ಪತ್ರ ಕೊಟ್ಟಿಲ್ಲ. ಒಂದು ಕರಪತ್ರ ಹೊರಡಿಸಿದ್ದೇನೆ ಎಂದು ಹೇಳಿದರು. ಆದರೂ ಸೋಮಣ್ಣ ಆದೇಶ ಪತ್ರ ಕೊಟ್ಟಿದ್ದೀರಿ, ಈಗಾಗಲೇ ಪ್ರಕರಣ ತನಿಖೆಯಾಗುತ್ತಿದೆ. ಆರು ಪಿಡಿಒಗಳು ಅಮಾನತುಗೊಂಡಿದ್ದಾರೆ ಎಂದರು.

ಇದರಿಂದ ಮತ್ತಷ್ಟು ಕೆರಳಿದ ಈಶ್ವರ್‌ ಖಂಡ್ರೆ, ತನಿಖೆಯ ವರದಿ ನನ್ನ ಬಳಿ ಇದೆ. ನೀವು ವಸತಿ ಇಲಾಖೆಯಲ್ಲಿ ಬಡವರ ಮನೆ ಪೂರ್ಣಗೊಳ್ಳಲು ಹಣ ಕೊಡುವುದಿಲ್ಲ. ಬೆಂಗಳೂರಿನಲ್ಲಿ 1 ಲಕ್ಷ ಮನೆ ಕಟ್ಟುವ ಯೋಜನೆಗೆ 600 ಕೋಟಿ ರೂ. ಮುಂಗಡ ಪಾವತಿಸಿದ್ದೀರಿ. ಭ್ರಷ್ಟ ಅಧಿಕಾರಿಯನ್ನು ಇಟ್ಟುಕೊಂಡು ರಾಜಕೀಯ ವಿರೋಧಿಗಳ ಮಾತು ಕೇಳಿ ವಿನಾಕಾರಣ ತನಿಖೆ ಮಾಡಿಸಿದ್ದೀರಿ ಎಂದು ಆರೋಪಿಸಿದರು. ಸೋಮಣ್ಣ ಪರ ಮಾದುಸ್ವಾಮಿ ನಿಂತು, ಆದೇಶ ಪತ್ರ ಕೊಡುವುದು ಶಾಸಕರ ವ್ಯಾಪ್ತಿಗೆ ಬರುವುದಾ? ಎಂದು ಪ್ರಶ್ನಿಸಿದರು.

ಈಶ್ವರ್‌ ಖಂಡ್ರೆ ಪರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಂತು, ಆದೇಶ ಪತ್ರ ಶಾಸಕರು ಕೊಡಲು ಸಾಧ್ಯವೇ? ಎಂದರು. ಈ ವೇಳೆ ವಾದ- ಪ್ರತಿವಾದ ಮುಂದುವರಿದು ಪರಸ್ಪರ ಸಾವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next