Advertisement

ಸಿದ್ದು-ವಿಶ್ವನಾಥ್‌ ನಡುವೆ ‘ಟಾಕ್‌ ವಾರ್‌’

02:13 AM Jul 05, 2019 | Team Udayavani |

ಮೈಸೂರು/ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್‌ ನಡುವಿನ ವಾಕ್ಸಮರ ಮುಂದುವರಿದಿದೆ.

Advertisement

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನವನ್ನೇ ನೆಟ್ಟಗೆ ಆರು ತಿಂಗಳು ನಿರ್ವಹಣೆ ಮಾಡಲು ಅವನ ಕೈಯಲ್ಲಿ ಆಗಲಿಲ್ಲ. ಅವರೇನ್ರಿ ನಮ್ಮ ಬಗ್ಗೆ ಮಾತನಾಡೋದು’ ಎಂದು ಎಚ್.ವಿಶ್ವನಾಥ್‌ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

‘ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಫ‌ಲರಾಗಿದ್ದಾರೆ. ಸಿದ್ದರಾಮಯ್ಯ ಅವರು ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸಿಲ್ಲ’ ಎಂಬ ವಿಶ್ವನಾಥ್‌ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದು, ‘ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನವನ್ನೇ 6 ತಿಂಗಳು ನಿರ್ವಹಿಸಲಾಗದೆ ರಾಜೀನಾಮೆ ಕೊಟ್ಟಿದ್ದಾನೆ. ಅವನ ಮಾತಿಗೆ ಏನಂಥ ಪ್ರತಿಕ್ರಿಯೆ ಕೊಡೋದು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೇ ನಿರ್ವಹಿಸಲಾಗದೆ ರಾಜೀನಾಮೆ ನೀಡಿದವರಿಗೆ ಸಮನ್ವಯ ಸಮಿತಿ ಬಗ್ಗೆ ಮಾತನಾಡುವ ಅರ್ಹತೆಯಾಗಲಿ, ನೈತಿಕತೆಯಾಗಲಿ ಇಲ್ಲ. ಅವರು ಸದಾ ಇತರರ ಸಾಮರ್ಥ್ಯವನ್ನು ಪ್ರಶ್ನಿಸುತ್ತ ತಮ್ಮ ದೌರ್ಬಲ್ಯವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರ ಬಗ್ಗೆ ನನಗೆ ಅನುಕಂಪವಿದೆ’ ಎಂದು ಕುಟುಕಿದರು.

ಮೈತ್ರಿ ಸರ್ಕಾರ ಸುಭದ್ರ: ಮೈತ್ರಿ ಸರ್ಕಾರ ಕಲ್ಲು ಬಂಡೆಯಂತೆ ಗಟ್ಟಿಯಾಗಿದ್ದು, ಅವಧಿ ಪೂರ್ಣ ಗೊಳಿಸಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಬಿಜೆಪಿಯವರು ಶಾಸಕರನ್ನು ಸೆಳೆಯಲು ಹಣದ ಆಮಿಷ ಒಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಇದರಲ್ಲಿ ಅವರು ಯಶಸ್ವಿಯಾಗು ವುದಿಲ್ಲ. ರಾಜ್ಯದ ಬಿಜೆಪಿ ನಾಯಕರು ‘ಆಪರೇಷನ್‌ ಕಮಲ’ ಮಾಡುತ್ತಿಲ್ಲ ಎನ್ನುತ್ತಿದ್ದರೂ ರಾಜ್ಯದಲ್ಲಿ ‘ಆಪರೇಷನ್‌ ಕಮಲ’ ಮಾತ್ರ ನಿಂತಿಲ್ಲ. ದೆಹಲಿ ಯಿಂದಲೇ ‘ಆಪರೇಷನ್‌ ಕಮಲ’ದ ಕಾರ್ಯಾ ಚರಣೆ ನಡೆಯುತ್ತಿದೆ. ಮೋದಿ, ಶಾ ಅವರೇ ಇದರ ಸೂತ್ರಧಾರರು ಎಂದು ಪುನರುಚ್ಚರಿಸಿದರು.

ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್‌ ಶಾಸಕ ಕೆ.ಮಹದೇವ್‌ಗೆ ಬಿಜೆಪಿಯವರು 30 ಕೋಟಿ ರೂ.ನ ಆಮಿಷ ಒಡ್ಡಿರುವ ವಿಚಾರ ನನಗೆ ತಿಳಿದಿಲ್ಲ. ಅವರನ್ನೇ ಕೇಳಿ ಎಂದು ಜಾರಿಕೊಂಡರು. ಬಿಜೆಪಿಯವರು ‘ಆಪರೇಷನ್‌ ಕಮಲ’ ಮಾಡುತ್ತಿಲ್ಲ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂಬ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯೆ ಕೇಳಿದಾಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ‘ಅವರ ಹೇಳಿಕೆಗೆ ಅವರು ಬದ್ಧರಾಗಿರಲಿ ಬಿಡಿ. ಅವರು ಅಮಿತ್‌ ಶಾ ಜೊತೆ ಮಾತನಾಡಿರಬೇಕು. ನಾನು ಶಾ ಜೊತೆ ಮಾತನಾಡಿಲ್ಲ’ ಎಂದು ತಿರುಗೇಟು ನೀಡಿದರು.

Advertisement

ಹೋಗೋ ಮೂದೇವಿ!: ‘ಅಣ್ಣಾ, ನೀವು ಎವರ್‌ಗ್ರೀನ್‌ ಸಿಎಂ ಎಂದ ಅಭಿಮಾನಿಗೆ ಸಿದ್ದರಾಮಯ್ಯ, ‘ಏ, ಹೋಗೋ ಮೂದೇವಿ’ ಎಂದು ಕೆನ್ನೆ ತಟ್ಟಿದ ಘಟನೆ ನಡೆಯಿತು. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಮೈಸೂರಿನ ಖಾಸಗಿ ಹೋಟೆಲ್ಗೆ ಆಗಮಿಸಿದ ಅವರನ್ನು ಸ್ವಾಗತಿಸುವ ವೇಳೆ ಅಭಿಯಾನಿಯೊಬ್ಬ, ‘ಅಣ್ಣಾ, ನೀವು ಎವರ್‌ಗ್ರೀನ್‌ ಸಿಎಂ’ ಎಂದಾಗ, ‘ಏ, ಹೋಗೋ ಮೂದೇವಿ’ ಎಂದು ಕೆನ್ನೆಗೆ ತಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next