Advertisement

ಬರದ ಬಗ್ಗೆ ವಿಧಾನಸಭೆಯಲ್ಲಿ ಭರಪೂರ ಚರ್ಚೆ

03:45 AM Feb 08, 2017 | |

ವಿಧಾನಸಭೆ: ನಿರೀಕ್ಷೆಯಂತೆ ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯದಲ್ಲಿ ಆವರಿಸಿರುವ ಬರದ ಬಗ್ಗೆ ಸುದೀರ್ಘ‌ ಚರ್ಚೆ ನಡೆಯಿತು.
ಪ್ರತಿಪಕ್ಷಗಳು ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫ‌ಲ್ಯವನ್ನು ಎತ್ತಿ ತೋರಿಸಿದರೆ ಸರ್ಕಾರ, ಸಮರ್ಪಕವಾಗಿ ನಿಭಾಯಿಸಿರುವುದಾಗಿ ಸಮರ್ಥಿಸಿಕೊಂಡಿತು.

Advertisement

ಬರ ಕುರಿತ ನಿಲುವಳಿ ಸೂಚನೆ ಮೇರೆಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಸರ್ಕಾರವನ್ನು
ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಒಂದು ಹಂತದಲ್ಲಿ ಬಿಜೆಪಿ ಸದಸ್ಯರು ಸಾಲಮನ್ನಾಗೆ ಆಗ್ರಹಿಸಿದಾಗ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಮೇಲೆ ಮುಗಿ ಬಿದ್ದು ಮೊದಲು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮನ್ನಾಗೆ ಕೇಂದ್ರ ಸರ್ಕಾರವನ್ನು ಒಪ್ಪಿಸಿ ಎಂದು ತಿರುಗೇಟು ನೀಡಿದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಬರ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫ‌ಲವಾಗಿದ್ದು, ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಬರ ಕುರಿತು ಬಿಜೆಪಿಯಿಂದಲೂ 3 ತಂಡ ಮಾಡಿ ಅಧ್ಯಯನ ನಡೆಸಿದ್ದೇವೆ. ಜನ ಸಮಸ್ಯೆ ಹೇಳಿಕೊಂಡಿದ್ದಾರೆ. ಗೋಶಾಲೆಗಳಿಲ್ಲ, ಮೇವಿನ ಬ್ಯಾಂಕ್‌ ಇಲ್ಲ. ಜಿಲ್ಲಾಧಿಕಾರಿಗಳನ್ನು
ಕೇಳಿದರೆ, ಮೇವು ಬ್ಯಾಂಕ್‌ ಸ್ಥಾಪನೆ, ಗೋಶಾಲೆ ಆರಂಭಿಸಲು ಸಿದ್ದತೆ ಮಾಡಿಕೊಳ್ಳುವುದಾಗಿ ಹೇಳುತ್ತಾರೆ. ಆದರೆ, ಇನ್ನೂ ಸಿದದ್ದ
ಮಾಡಿಕೊಳ್ಳುವುದರಲ್ಲೇ ಇದ್ದಾರೆ ಎಂದು ಟೀಕಿಸಿದರು.

ಬಿಜೆಪಿಯ ಗೋವಿಂದ ಕಾರಜೋಳ ಮಾತನಾಡಿ, ಈ ಸರ್ಕಾರ ಬಂದಾಗಿನಿಂದ ರಾಜ್ಯಕ್ಕೆ ಬರ ಬಿದ್ದಿದೆ. 176 ತಾಲೂಕುಗಳ ಪೈಕಿ
160ನ್ನು ಬರ ಎಂದು ಘೋಷಿಸಿದ್ದೀರಿ. ಕೇವಲ ಘೋಷಿಸಿಬಿಟ್ಟರೆ ಸಾಕೇ? ಪರಿಹಾರ ಬೇಡವೇ? ಪ್ರತಿ ತಾಲೂಕಿಗೆ ಕುಡಿಯುವ ನೀರು
ಪೂರೈಕೆಗಾಗಿ ಕೇವಲ 30 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಇಷ್ಟು ಸಾಕೆ ಎಂದು ಪ್ರಶ್ನಿಸಿದರು. ಜೆಡಿಎಸ್‌ನ ಶಿವಲಿಂಗೇಗೌಡ ಮಾತನಾಡಿ, ಅರಣ್ಯದಲ್ಲಿ ನೀರಿಲ್ಲದೆ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬರ ಕುರಿತ ಚರ್ಚೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉತ್ತರಿಸಿ, ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಎಲ್ಲ ರೀತಿಯ ಕ್ರಮ 
ಕೈಗೊಂಡಿದೆ. ಹಣಕಾಸಿನ ಸಮಸ್ಯೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರದಿಂದ ರಾಜ್ಯ ವಿಕೋಪ ಪರಿಹಾರ ನಿಧಿಯಡಿ 217.5 ಕೋಟಿ ರೂ.,ಕೇಂದ್ರ ವಿಕೋಪ ಪರಿಹಾರ ನಿಧಿಯಡಿ 606.98 ಕೋಟಿ ರೂ.ಬಿಡುಗಡೆಯಾಗಿದೆ. ಅದೇ ರೀತಿ, ರಾಜ್ಯ ಸರ್ಕಾರ ಇದುವರೆಗೆ 1144.38 ಕೋಟಿ ರೂ.ಬಿಡುಗಡೆ ಮಾಡಿದೆ. ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಹೆಚ್ಚು ಒತ್ತು ಕೊಡಲಾಗಿದೆ. 2016ರ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ 17,193 ಕೋಟಿ ರೂ.ನಷ್ಟವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 4702.54 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ
ಸರ್ಕಾರ 1782.44 ಕೋಟಿ ರೂ. ಮಂಜೂರು ಮಾಡಿದ್ದು, ಈ ಪೈಕಿ ಮೊದಲ ಹಂತದಲ್ಲಿ 450 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪಂಚಾಯ್ತಿ ಮಟ್ಟದಲ್ಲಿ ಕ್ರಿಯಾಯೋಜನೆ ರೂಪಿಸಿ ಅದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳಿಗೆ ಚಾಟಿ
ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಗದೀಶ್‌ ಶೆಟ್ಟರ್‌, ಬರ ಪರಿಸ್ಥಿತಿ ಕುರಿತಂತೆ ಹಿಂದೆ ನೀವು ಅಲ್ಲಿ (ಸ್ಪೀಕರ್‌
ಸ್ಥಾನದಲ್ಲಿದ್ದಾಗ) ಕುಳಿತು ಏನು ಹೇಳುತ್ತಿದ್ದೀರಿ, ಸಚಿವರಾಗಿ ಕುಳಿತು ಏನು ಮಾಡುತ್ತಿದ್ದೀರಿ? ಸ್ಪೀಕರ್‌ ಸ್ಥಾನದಲ್ಲಿದ್ದಾಗ ಏನು ಹೇಳುತ್ತಿದ್ದೀರೋ ಅದನ್ನೇ ಸಚಿವರಾಗಿ ಮಾಡಿ ಸೋರಿಸಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಉದ್ದೇಶಿಸಿ
ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು, ಅಲ್ಲಿ (ಸ್ಪೀಕರ್‌ ಸ್ಥಾನದಲ್ಲಿ) ಕೂತು ಹೇಳುವುದಕ್ಕೂ, ಇಲ್ಲಿ ಕೆಲಸ ಮಾಡುವ ಜಾಗದಲ್ಲಿದ್ದು ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ…! ಬರ ಪರಿಹಾರದ ವಿಚಾರದಲ್ಲಿ ಕೆಲವು ಜಿಲ್ಲಾಧಿಕಾರಿಗಳು
ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರಿಗೆ ಚಾಟಿ ಬೀಸಬೇಕಾಗಿದೆ. ಯಾವ ಜಿಲ್ಲಾಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲವೋ ಅಂಥವರ ಬಗ್ಗೆ ತಮಗೆ ಮಾಹಿತಿ ನೀಡಿ. ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next