Advertisement

ರೌಡಿಶೀಟರ್‌ ಪಟ್ಟಿ ಬಗ್ಗೆ ಕಾವೇರಿದ ಚರ್ಚೆ

07:20 AM Feb 07, 2018 | Team Udayavani |

ವಿಧಾನಸಭೆ: ರೌಡಿ ಶೀಟರ್‌ ಪಟ್ಟಿ ಬಗ್ಗೆ ವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದು ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣ ವಾಯಿತು. ಚರ್ಚೆ ತಾರಕಕ್ಕೇರಿದಾಗ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ರೌಡಿಶೀಟರ್‌ಗಳ ಪಟ್ಟಿಯನ್ನು ಶಾಸಕರಿಗೆ ಒದಗಿಸಲಾಗುವುದು ಎಂದರು.

Advertisement

ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಯು.ಬಿ. ಬಣಕಾರ ಪರವಾಗಿ ಬಿಜೆಪಿ ಸಚೇತಕ ಸುನೀಲ್‌ ಕುಮಾರ್‌ ರೌಡಿಶೀಟರ್‌ ಪಟ್ಟಿಗೆ ಸೇರಿಸಲು ಇರುವ ಮಾನದಂಡಗಳೇನು ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು. ಬಿಜೆಪಿ ಶಾಸಕರಾದ ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಮಾಜಿ ಗೃಹಸಚಿವ ಆರ್‌.ಅಶೋಕ ಸೇರಿ ಹಲವರು ಜನಪ್ರತಿಧಿಗಳಿಗೆ ರೌಡಿಶೀಟರ್‌ ಪಟ್ಟಿ ನೀಡದಿರುವ ಸರ್ಕಾರದ ಕ್ರಮವನ್ನು ಟೀಕಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷ ಕೋಳಿವಾಡ ಅವರು ಸಹ ತಮ್ಮ ಕ್ಷೇತ್ರದಲ್ಲೂ ಅನಗತ್ಯವಾಗಿ ಅಮಾಯಕರನ್ನು ರೌಡಿಪಟ್ಟಿಗೆ
ಸೇರಿಸಲಾಗಿದೆ ಎಂದು ಸರ್ಕಾರದ ಗಮನ ಸೆಳೆದರು. ಗೃಹ ಸಚಿವ ರಾಮಲಿಂಗಾರೆಡ್ಡಿ ರೌಡಿಶೀಟರ್‌ಗಳ ಪಟ್ಟಿಗೆ ಸೇರಿಸಲು ಇರುವ ಮಾನದಂಡಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿ ಶಾಸಕರಿಗೆ ರೌಡಿಶೀಟರ್‌ಗಳ ಪಟ್ಟಿ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಇದರಿಂದ ಸಿಟ್ಟಿಗೆದ್ದು ಬಿಜೆಪಿ ಶಾಸಕರು ಸರ್ಕಾರದ ಮೇಲೆ ಮುಗಿಬಿದ್ದಾಗ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್‌ಕುಮಾರ್‌ ತಮ್ಮ ಕ್ಷೇತ್ರಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ರಾಜಕೀಯ ಕಾರಣಗಳಿಗೆ ಸೇರಿಸಿ ಕಿರುಕುಳ ನೀಡಲಾ ಗುತ್ತಿದೆ. ಸರ್ಕಾರ ಪೊಲೀಸ್‌ ಇಲಾ ಖೆಯನ್ನು ಈ ವಿಚಾರದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು. ಚರ್ಚೆ ತಾರಕಕ್ಕೇರಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯ ಪ್ರವೇಶಿಸಿ ಶಾಸಕರಿಗೆ ರೌಡಿ ಪಟ್ಟಿಯನ್ನ ಒದಗಿಸಲಾಗುವುದು. ರೌಡಿ ಪಟ್ಟಿಗೆ ಹೆಸರು ಸೇರಿಸುವಾಗ ರಾಜಕೀಯ ವಾಗಿ ರೌಡಿ ಶೀಟರ್‌ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿ ದರು. ಅಮಾಯಕರ ಹೆಸರನ್ನು ಸೇರಿಸಿದ್ದರೆ ಅವರ ಹೆಸರನ್ನು ಕೈಬಿಡಲಾಗುವುದೆಂದು ಭರವಸೆ ನೀಡಿದರು. ಒಂದು ಹಂತದಲ್ಲಿ ಸಿಎಂ ಅವರು ರೌಡಿ ಪಟ್ಟಿಯಲ್ಲಿರುವವರೆಲ್ಲಾ ಬಿಜೆಪಿಯವರೇ? ಎಂದು ಕಾಲೆಳೆದಾಗ
ಬಿಜೆಪಿ ಶಾಸಕರು ತೀವ್ರ ಪ್ರತಿರೋಧ ತೋರಿದರು. 

ಶೆಟ್ಟರ್‌, ಸಚಿವ ಖಾದರ್‌ ವಾಗ್ವಾದ 
ರೌಡಿಶೀಟರ್‌ ಪಟ್ಟಿ ಚರ್ಚೆವೇಳೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಚಿವ ಯು.ಟಿ.ಖಾದರ್‌ ಜತೆ ರೌಡಿ ಪಟ್ಟಿಯಲ್ಲಿದ್ದವರ ಫೋಟೊ ಇರುವುದನ್ನು ಪ್ರಸ್ತಾಪಿಸಿದರು. ಇದರಿಂದ ಸಿಟ್ಟಿಗೆದ್ದ ಸಚಿವ ಖಾದರ್‌ ಪ್ರಧಾನಿ ಜೊತೆ ರೌಡಿಶೀಟರ್‌ ಇರುವ ಫೋಟೊ ಸಹ ತಮ್ಮ ಬಳಿ ಇದೆಯೆಂದು ಹೇಳಿದಾಗ ಸದನದಲ್ಲಿ ಮತ್ತೆ ಕೋಲಾಹಲ ಉಂಟಾಯಿತು. ನಂತರ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಪ್ರಧಾನಿ ಬಗ್ಗೆ ಬಳಸಿದ ಪದಗಳನ್ನು ಕಡತದಿಂದ ತೆಗೆಸಿ ಚರ್ಚೆಗೆ ನಾಂದಿ ಹಾಡಿದರು.

ಮಾರ್ಷಲ್‌ ಕರೆದ ಸ್ಪೀಕರ್‌
ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ರೌಡಿಶೀಟರ್‌ ವಿಷಯದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದಾಗ ಜೆಡಿಎಸ್‌ ಬಂಡಾಯ ಶಾಸಕ ಜಮೀರ್‌
ಅಹ್ಮದ್‌ ರೌಡಿ ಪಟ್ಟಿ ಬಿಜೆಪಿ ಶಾಸಕರಿಗೆ ಯಾಕೆ ಬೇಕೆಂದು ಪ್ರಶ್ನಿಸಿ ಮಾತನಾಡಿದರು. ಆಗ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದಾಗ ಕೋಲಾಹಲದ ವಾತಾವರಣ ಉಂಟಾಯಿತು. ಸ್ಪೀಕರ್‌ ಅವರು ಜಮೀರ್‌ಗೆ ಕುಳಿತುಕೊಳ್ಳಲು ತಿಳಿಸಿದರು. ಸಭಾಧ್ಯಕ್ಷರ ಸೂಚನೆ ಗಮನಿಸದೇ ಜಮೀರ್‌ ಮಾತು ಮುಂದು ವರಿಸಿದಾಗ ಸಿಟ್ಟಿಗೆದ್ದ ಸ್ಪೀಕರ್‌, ಮಾರ್ಷಲ್‌ ಅವರನ್ನು ಕರೆದು ಜಮೀರ್‌ಗೆ ಕೂರಿಸುವಂತೆ ಹೇಳಿದ್ದನ್ನು ಗಮನಿಸಿದ ಜಮೀರ್‌ ಮಾತು ನಿಲ್ಲಿಸಿ ತಣ್ಣಗೆ ಆಸೀನರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next