Advertisement

ತಾಳಿಕೋಟೆ ಪುರಸಭೆ ಅಧಿಕಾರಿಗಳ ಚಿತ್ತ ಹರಿಯುವುದೇ ಇತ್ತ?

11:55 AM Dec 14, 2019 | Naveen |

ಜಿ.ಟಿ. ಘೋರ್ಪಡೆ
ತಾಳಿಕೋಟೆ:
ಪಟ್ಟಣದ ಕೆಲವು ಬಡಾವಣೆಗಳಲ್ಲಿ ಪುರಸಭೆ ವತಿಯಿಂದ ದಿನ ಬಳಕೆಗಾಗಿ ನಿರ್ಮಿಸಲಾಗಿರುವ ಬೋರ್‌ವೆಲ್‌ ಟ್ಯಾಂಕಿನಿಂದ ದಿನಕ್ಕೆ ಲಕ್ಷಾಂತರ ಲೀ. ನೀರು ಪೋಲಾಗುತ್ತಿದ್ದು ಪುರಸಭೆ ಅಧಿಕಾರಿಗಳು ಮೌನ ವಹಿಸಿದ್ದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನೀರನ್ನು ಮಿತವ್ಯಯ ಬಳಿಸಿ ಶೇಖರಿಸಿಡುವ ಕಾರ್ಯ ಮಾಡಬೇಕು ಎಂದು ಜನರಿಗೆ ತಿಳಿವಳಿಕೆ ನೀಡುವ ಪುರಸಭೆಯೇ ಬೋರ್‌ವೆಲ್‌ ಮೂಲಕ ಲಕ್ಷಾಂತರ ಲೀ. ನೀರು ನಿತ್ಯ ಚರಂಡಿ ಪಾಲಾಗುತ್ತಿದ್ದರೂ ಇದಕ್ಕೆ ಕಾಡಿವಾಣ ಹಾಕದಿರುವುದು ಅಂತರ್ಜಲಕ್ಕೆ ಕಂಟಕ ಬರಬಹುದೆಂಬ ಭಯ ಹುಟ್ಟಿಕೊಂಡಿದೆ. ಈ ಹಿಂದೆ ಪಟ್ಟಣದ ಸ್ಥಳೀಯ ಪ್ಯಾರಾ ಮೆಡಿಕಲ್‌ ಕಾಲೇಜ್‌ ಆವರಣದಲ್ಲಿ ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಜಲ ದಿನಾಚರಣೆಯಂದು ದೊಡ್ಡ ಕಾರ್ಯಕ್ರಮ ಆಯೋಜಿಸಿತ್ತು.

ನೀರನ್ನು ವ್ಯರ್ಥವಾಗಿ ಪೋಲು ಮಾಡಬೇಡಿ ಎಂದು ಜನರಿಗೆ ತಿಳಿವಳಿಕೆ ನೀಡಲಾಗಿತ್ತು. ಪಟ್ಟಣದ ಪಂಚಸೈಯದ್‌ ದಾರ್ಗಾದ ಹತ್ತಿರ ಬೋರ್‌ವೆಲ್‌ ಗಳಲ್ಲಿಯ ನೀರು ಟ್ಯಾಂಕ್‌ಗಳಿಗೆ ತುಂಬಿ ಗಂಟೆಗಟ್ಟಲೇ ಹರಿಯುತ್ತಿದೆ. ಅದೇ ರೀತಿ ಬಸವೇಶ್ವರ ಬಡಾವಣೆಗೆ ಹೊಂದಿಕೊಂಡಿರುವ ಬೋರ್‌ವೆಲ್‌ ಟ್ಯಾಂಕ್‌ ತುಂಬಿ ಹರಿಯುತ್ತಿರುತ್ತದೆ. ಭಾವಸಾರ ಕ್ಷತ್ರೀಯ ಕಾಂಪ್ಲೆಲ್ಸ್‌ಗೆ ಹೊಂದಿಗೊಂಡಿರುವ ಬೊರ್‌ ವೆಲ್‌ ಟ್ಯಾಂಕು ನಿತ್ಯ ತುಂಬಿ ಹರಿಯುತ್ತದೆ. ಇಂತಹ ಅಂತರ್ಜಲ ಮಟ್ಟದ ನೀರು ಪೋಲಾಗುವದು ಕೆಲವು ಬಡಾವಣೆಗಳಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ. ಈ ಕುರಿತು ಬಡಾವಣೆ ನಾಗರಿಕರು ಪುರಸಭೆಗೆ ತಿಳಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದರು.

ಪುರಸಭೆ ವತಿಯಿಂದ ಪೂರೈಸಲಾಗುವ ಕುಡಿಯುವ ಸಿಹಿ ನೀರು ಬಿಟ್ಟಾಗಲೂ ಸಹ ತಮಗೆ ಬೇಕಾದಷ್ಟು ಶೇಖರಿಸಿಕೊಂಡು ಉಳಿದ ನೀರನ್ನು ಚರಂಡಿಗಳಿಗೆ ಬಿಡುವ ವ್ಯವಸ್ಥೆ ಇನ್ನೂ ಕೂಡಾ ಮುಂದುವರಿದಿದೆ. ಕೆಲವೆಡೆ ನೀರಿನ ಪೈಪ್‌ಲೈನ್‌ಗಳಿಗೆ ನಲ್ಲಿಗಳ ಜೋಡಣೆ ಇಲ್ಲ, ಬಂದಷ್ಟು ನೀರು ಚರಂಡಿ ಪಾಲಾಗುತ್ತಿದೆ. ಮಾಳನೂರ ಕೆರೆಯಿಂದ ಪಟ್ಟಣದ ಜನತೆಗೆ ಕುಡಿಯಲು ಪೂರೈಸಲಾಗುತ್ತಿರುವ ಸಿಹಿ ನೀರು ಕಳೆದ ವರ್ಷ ಪುರಸಭೆ ನಾಗರಿಕರಿಗೆ ಸೂಚನೆ ನೀಡಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆ ಬರಬಾರದೆಂಬ ಉದ್ದೇಶದಿಂದ 3 ದಿನಕ್ಕೊಮ್ಮೆ ಸಿಹಿ ನೀರು ಸರಬರಾಜು ಮಾಡುತ್ತಿದ್ದುದ್ದನ್ನು ಬದಲಾಯಿಸಿ 4, 5, ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತ ಬಂದು ಬೇಸಿಗೆ ಕಾಲವನ್ನು ಕಳೆಯಲಾಯಿತು.

ಪಟ್ಟಣದ ಜನರಿಗೆ ಬಂದ ಕುಡಿಯುವ ನೀರಿನ ಭವಣೆಯನ್ನು ಲಕ್ಷಿಸಿದ ಅಂದಿನ ಪುರಸಭೆ ಆಡಳಿತ ಮಂಡಳಿ ಮಾಳನೂರ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಕ್ರಮ ಕೈಗೊಂಡು ಆಳವನ್ನು ಹೆಚ್ಚಿಸಿ ಹೆಚ್ಚಿನ ನೀರನ್ನು ಶೇಖರಣೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.

Advertisement

ಪಟ್ಟಣದ ಪ್ರತಿ ಬಡಾವಣೆಯಲ್ಲಿರುವ ಬೋರ್‌ ವೆಲ್‌ಗ‌ಳ ನಿರ್ವಹಣೆಗೆ ಪುರಸಭೆಯಿಂದ ಯಾವುದೇ ಕಾರ್ಮಿರನ್ನು ನೇಮಿಸಿಲ್ಲ. ನೀರು ಬೇಕೆಂದಾಗ ನಾಗರಿಕರೇ ಚಾಲು ಮಾಡುವದು, ಅವರೇ ಬಂದ್‌ ಮಾಡುವ ಕಾರ್ಯ ಮುಂದುವರಿದಿದೆ. ಇಂತಹ ಕಾರ್ಯದಿಂದ ಕೆಲವು ಬಡಾವಣೆಗಳಲ್ಲಿ ಬೋರ್‌ ವೆಲ್‌ ಮೋಟಾರ್‌ಗಳು ಸುಟ್ಟ ಪ್ರಸಂಗಗಳು ನಡೆದಿವೆ. ಆ ಸಮಯದಲ್ಲಿ ಬಡಾವಣೆ ನಾಗರಿಕರ ನೀರಿನ ತಾಪತ್ರೇಯ ತಪ್ಪಿಸಲು ಪುರಸಭೆ ಹೊಸ ಮೊಟಾರ್‌ ಜೋಡಿಸಿ ಮತ್ತೆ ಕೈ ತೊಳೆದುಕೊಳ್ಳುವಂತಹ ಕಾರ್ಯ ಮಾಡುತ್ತ ಸಾಗಿರುವದು ಬೇಸರದ ಸಂಗತಿಯಾಗಿದೆ.

ಪಟ್ಟಣದ ಬೋರ್‌ವೆಲ್‌ಗ‌ಳಿಂದ ನೀರು ಪೋಲಾಗುತ್ತಿರುವದು ಗಮನಕ್ಕೆ ಬಂದಿದೆ. ಪ್ರತಿ ಬೋರ್‌ವೆಲ್‌ ಗೆ ಸಮಯ ನಿಗದಿಯ ಅಟೋಸ್ಟಾರ್ಟರ್‌ ಕೂಡಿಸುವ ಯೋಚನೆ ಮಾಡಿದ್ದೇನೆ.ಪ್ರತಿ ಮನೆಯವರಿಗೆ ನೀರು ಪೋಲು ಮಾಡದಂತೆ ತಿಳಿವಳಿಕೆ ನಿಡಿದ್ದಾಗಿದೆ. ಅದಾಗ್ಯೂ ನೀರು ಚರಂಡಿ ಪಾಲಾಗುತ್ತಿದ್ದು ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ.
ಸಿ.ವಿ. ಕುಲಕರ್ಣಿ, ಪುರಸಭೆ
ಮುಖ್ಯಾಧಿಕಾರಿ

ಅಂತರ್ಜಲ ಕಾಪಾಡಿಕೊಳ್ಳಬೇಕಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಜನರಿಗೆ ತಿಳಿವಳಿಕೆ ನೀಡುವ ಪುರಸಭೆ ಅಧಿಕಾರಿಗಳೇ ನೀರು ಪೋಲಿಗೆ ಕಾರಣರಾಗಿರುವದು ದುರದೃಷ್ಟಕರ. ಕೂಡಲೇ ಕುಡಿಯುವ ನೀರಿನ ಪೋಲಿಗೆ ಕಡಿವಾಣ ಹಾಕುವಂತಹ ಕಾರ್ಯಕ್ಕೆ ಪುರಸಭೆ ಮುಂದಾಗಬೇಕಿದೆ.
ಜೈಭೀಮ ಮುತ್ತಗಿ ,ಕರವೇ
ತಾಲೂಕು ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next