ತಾಳಿಕೋಟೆ: ತಾಲೂಕಿನ ಭಂಟನೂರ ಗ್ರಾಮದಲ್ಲಿ ಕುಡಿಯುವ ನೀರಿನ ಆಹಾಕಾರ ಬುಗಿಲೆದ್ದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಭಂಟನೂರ ಗ್ರಾಮದಲ್ಲಿ ಭೀಕರ ಬರದಿಂದ ಜಲ ಮೂಲಗಳೆಲ್ಲವೂ ಬತ್ತಿ ಹೋಗಿದ್ದು ಜನ ಜಾನುವಾರುಗಳಿಗೆ ಕುಡಿಯಲು ನೀರಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕೆಂದು ಸುಮಾರು 6 ತಿಂಗಳಿಂದ ಗ್ರಾಪಂ ಅಭಿವೃದ್ಧಿ ಅಕಾರಿ, ತಹಶೀಲ್ದಾರ್ ಮತ್ತು ತಾಪಂ ಮುಖ್ಯ ಕಾರ್ಯನಿರ್ವಾಹಕರಿಗೆ ಮನವಿ ಮಾಡುತ್ತ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮದ ರಾಯಣ್ಣ ಬಡಾವಣೆ ಮತ್ತು ಹಳೆ ಊರು ಸೇರಿದಂತೆ ಇನ್ನೂಳಿದ ಕಡೆಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ನೀರಿನ ಸಮಸ್ಯೆ ನೀಗಿಸಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕೇಳಿದರೆ ತಹಶೀಲ್ದಾರ್‌ಗೆ ಕೇಳಿ ತಾಪಂ ಅಧಿಕಾರಿಗೆ ಕೇಳಿ ಎಂದು ಹಾರಿಕೆ ಉತ್ತರಗಳನ್ನು ನೀಡುತ್ತ ಸಾಗಿದ್ದಾರೆ ಎಂದುದೂರಿದರು.
ನೀರಿನ ಸಮಸ್ಯೆ ನಿವಾರಣೆ ಕುರಿತು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ತಹಶೀಲ್ದಾರ್ ಕಚೇರಿಗೆ ಗ್ರಾಮಸ್ಥರೊಂದಿಗೆ ತೆರಳಿ ಅಧಿಕಾರಿಗಳ ಸಭೆ ನಡೆಸಿ ಭಂಟನೂರ ಗ್ರಾಮಕ್ಕೆ ಬಂದಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಗ್ರಾಮದ ಹೊರ ವಲಯದಲ್ಲಿರುವ ಖಾಸಗಿ ವ್ಯಕ್ತಿಯ ಬೋರ್‌ವೆಲ್ದಿಂದ ಸುಮಾರು 300 ಮೀ. ಪೈಪ್‌ಲೈನ್ ಮಾಡಿಸಿ ಎರಡು ನೀರಿನ ಗುಮ್ಮಿಗಳಿಗೆ ನೀರೊದಗಿಸಲು ಸೂಚಿಸಿದ್ದರು. ಆ ಸಮಯದಲ್ಲಿ ಶಾಸಕ ಮಾತಿಗೆ ತಲೆ ಅಲ್ಲಾಡಿಸಿದ್ದ ಅಕಾರಿಗಳೇ ಈಗ ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದಂತೆ ವರ್ತಿಸಿ ಗ್ರಾಮಸ್ಥರ ತಾಳ್ಮೆ ಪರಿಕ್ಷೆ ಮಾಡುತ್ತಿದ್ದಾರೆ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಸುದ್ದಿ ತಿಳಿದ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರಳಕರ ಹಾಗೂ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಕೆ. ದೇಸಾಯಿ ಅವರು ಖಾಸಗಿ ಜಮೀನಿನಲ್ಲಿರುವ ಬೊರ್‌ವೆಲ್ ಮಾಲೀಕನಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕುಡಿಯುವ ನೀರೊದಗಿಸಲು ಮನವಿ ಮಾಡಿ ಗ್ರಾಮಸ್ಥರಿಗೆ ತಾತ್ಕಾಲಿಕ ಪರಿಹಾರ ನೀಡಿದರು.
ಪ್ರತಿಭಟನಾ ನಿರತ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೇವಲ ತಾತ್ಕಾಲಿಕ ಪರಿಹಾರ ನೀಡಿದರೆ ಸಾಲದು. ತಿಂಗಳಾಂತ್ಯದೊಳಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಗ್ರಾಪಂ ಕಚೇರಿ ಮುಂದೆ ಅಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಪ್ರತಿಭಟನಾ ನೇತೃತ್ವದಲ್ಲಿ ಗ್ರಾಮದ ಮುಖಂಡರುಗಳಾದ ಮಡಿವಾಳಪ್ಪ ಐನಾಪುರ, ಗುರುಸ್ವಾಮಿ ಬಳಬಟ್ಟಿ, ಧರ್ಮಯ್ಯ ಹಿರೇಮಠ, ಶಿವನಗೌಡ ಸಾಸನೂರ, ಸಿದ್ದನಗೌಡ ಬಸರಡ್ಡಿ, ರಾಮನಗೌಡ ಐನಾಪುರ, ಜಟ್ಟೆಪ್ಪ ಆಲ್ಯಾಳ, ಜಟ್ಟೆಪ್ಪ ಬ್ಯಾಕೋಡ, ಬೀಮಣ್ಣ ತಳ್ಳಳ್ಳಿ, ಸಾಯಬಣ್ಣ ತಳ್ಳಳ್ಳಿ, ಯಲ್ಲಪ್ಪ ಗುರಿಕಾರ, ಒಳಗೊಂಡಂತೆ ನೂರಾರು ಗ್ರಾಮಸ್ಥರರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.